

ಅತಿ ಚಿಕ್ಕಮೆದುಳು ಹಾಗೂ ಪಾರ್ಶವಾಯುಕಾರಕ ನರ ದೌರ್ಬಲ್ಯಕ್ಕೆ ಕಾರಣವಾಗುವ ಝಿಕಾ ಅಪಾಯಕಾರಿ ಮಟ್ಟದಲ್ಲಿ ವಿಶ್ವಾದ್ಯಂತ ಹರಡುತ್ತಿದೆ. ಕಳೆದ ತಿಂಗಳಲ್ಲಿ ಬ್ರೆಜಿಲ್ ಸೇರಿದಂತೆ ದಕ್ಷಿಣ ಅಮೆರಿಕದ ಸುಮಾರು 23 ರಾಷ್ಚ್ರಗಳಲ್ಲಿ ಹರಡಿರುವ ಝಿಕಾ ವಾಸ್ತವವಾಗಿ ಮೊದಲು ಕಾಣಿಸಿಕೊಂಡಿದ್ದು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಎಂಬುದು ರೋಗದ ಇತಿಹಾಸ ಮತ್ತು ಸೊಂಕು ಹರಡುವಿಕೆಯನ್ನು ಸಂಶೋಧಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಅಂದಾಜು.
1947ರಲ್ಲಿ ದಕ್ಷಿಣ ಆಫ್ರಿಕಾದ ಉಂಗಾಂಡದಲ್ಲಿ ರೋಗದ ಮೊದಲ ಪ್ರಕರಣ ದಾಖಲಾಗಿದೆ. 1960ರ ಸುಮಾರಿಗೆ ನೈಜೀರಿಯಾದ ವ್ಯಕ್ತಿಯೊಬ್ಬರಲ್ಲಿ ವೈರಸ್ ಪತ್ತೆಯಾಯಿತು. ನಂತರ ಸುಮಾರು 12 ಪ್ರಕರಣಗಳು ಆಫ್ರಿಕಾದ ಬೇರೆ ಬೇರೆ ರಾಷ್ಟ್ರಗಳಲ್ಲಿ ಪತ್ತೆಯಾದವು. 1966ರಲ್ಲಿ ಆಗ್ನೆಯ ಏಷ್ಯಾದಲ್ಲಿ ಮೊದಲ ಪ್ರಕರಣ ದಾಖಲಾಯಿತು. 1970ರ ದಶಕದಲ್ಲಿ ಪಾಕಿಸ್ತಾನ, ಭಾರತ, ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಕೆಲವು ಸೊಂಕು ಪ್ರಕರಣಗಳು ಪತ್ತೆಯಾದವು. ನಂತರ ಸುಮಾರು ನಾಲ್ಕು ದಶಕಗಳ ಬಳಿಕ 2007ರಲ್ಲಿ ಮೈಕ್ರೋನೇಷಿಯಾದ ಯಾಪ್ ದ್ವೀಪದಲ್ಲಿ ಪತ್ತೆಯಾದ ಪ್ರಕರಣವೇ ವಿಶ್ವದ ಮೊದಲ ಅಧಿಕೃತ ಝಿಕಾ ಪ್ರಕರಣ. ದ್ವೀಪದ 200ಕ್ಕೂ ಹೆಚ್ಚು ಮಂಜಿಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅಲ್ಪ ಜನಸಂಖ್ಯೆ ಪುಟ್ಟ ದ್ವೀಪದಲ್ಲಿ ದೊಡ್ಡ ಪ್ರಮಾಣದ ಆತಂಕ ಸೃಷ್ಟಿಯಾಗಿತ್ತು.
2013ರಲ್ಲಿ ಫ್ರೆಂಚ್ ಪಾಲಿನೇಷಿಯಾದಲ್ಲಿ ಒಮ್ಮೆಲೆ 35 ಸಾವಿರ ಪ್ರಕರಣಗಳು ಪತ್ತೆಯಾಗುವ ಮೂಲಕ ಮೊದಲಬಾರಿ ಜಾಗತಿಕ ಗಮನ ಸೆಳೆಯಿತು. ಆಗ ಸೊಂಕಿತ ಹಲವರಲ್ಲಿ ಪಾರ್ಶವಾಯು ಮತ್ತು ಗಿಲಿಯನ್ ಬಾರ್ರೆ ಸಿಂಡ್ರೋಮ್ ಕಾಣಿಸಿಕೊಂಡಿತು. 2014ರಲ್ಲಿ ಫುಟ್ಬಾಲ್ ವಿಶ್ವಕಪ್ ವೇಳೆ ಝಿಕಾ ಬ್ರೆಜಿಲ್ ಗೆ ಪ್ರವೇಶಿಸಿತು. ಕೆಲವರ ಪ್ರಕಾರ, ರಿಯೋಡಿ ಜನೈರೋ ದಲ್ಲಿ ನೆದ ವಿಶ್ವ ಕನೋಯಿಂಗ್ ಚಾಂಪಿಯನ್ ಶಿಪ್ ವೇಳೆಗೇ ಈ ವೈರಾಣು, ಬಂದಿರಬಹುದು. ಒಂದೇ ವರ್ಷದಲ್ಲಿ ಇಡೀ ಬ್ರೆಜಿಲ್ ಗೆ ವ್ಯಾಪಿಸಿದ ಸೋಂಕು, ಬಳಿಕ 2015ರ ಅಕ್ಟೋಬರ್ ನಲ್ಲಿ ನೆರೆಯ ಕೊಲಂಬಿಯಾದಲ್ಲೂ ಕಾಣಿಸಿಕೊಂಡಿತು. ಬಳಿಕ ಎಲ್ ಸಲ್ವಡಾರ್, ಸುರಿನೇಮ್, ಗ್ವಾಟೆಮಾಲಗಳಲ್ಲಿ ಹರಡಿತು. ಡಿಸೆಂಬರ್ ವೇಳೆಗೆ ಮೆಕ್ಸಿಕೋಗೆ ಕಾಲಿಡುವ ಮೂಲಕ ಅಮೆರಿಕದಲ್ಲಿ ನಡುಕ ಹುಟ್ಟಿಸಿತು. ಹೊಸ ವರ್ಷದ ಆರಂಭದಲ್ಲಿ ಹುಂಡುರಾಸ್, ಪೋರ್ಟ್ ರಿಕೋ, ಫ್ರೆಂಚ್ ಗಯಾನ, ಮಾರ್ಟಿನಿಕಿ ಸೇರಿ ಕೆರೀಬಿಯನ್, ರಾಷ್ಟ್ರಗಳಿಗೆ ವ್ಯಾಪಿಸಿತು.
ಅಂತಿಮವಾಗಿ ಕಳೆದ ಒಂದುವಾರದಲ್ಲಿ ಗಯಾನ, ಬಾರ್ಬೋಡಾಸ್, ಈಕ್ವೆಡಾರ್, ಬೊಲಿವಿಯಾ, ಹೈಟಿ, ಮತ್ತು ಡೊಮಿನಿಕನ್ ರಿಪಬ್ಲಿಕ್ ನಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಅಮೆರಿಕ, ಬ್ರಿಟನ್, ಡೆನ್ಮಾರ್ಕ್ ಮತ್ತು ಜರ್ಮನಿ ಹಾಗೂ ಪಶ್ಚಿಮ ಆಫ್ರಿಕಾದ ಕೇಪ್ ವರ್ಡೆಯಲ್ಲಿ ಕೆಲವು ಬೆರಳೆಣಿಕೆ ಪ್ರಕರಣಗಳು ಪತ್ತೆಯಾಗುವ ಮೂಲಕ ಝಿಕಾ ಇದೀಗ ಇಡೀ ಗೋಳವನ್ನು ವ್ಯಾಪಿಸಿದಂತಾಗಿದೆ. ಹಾಗಾಗಿ ಆತಂಕಕಾರಿ ವೈರಾಣು ರೋಗ ಇದೀಗ ಅಕ್ಷರಶಃ ಜಾಗತಿಕ ಸಾಂಕ್ರಾಮಿಕವಾಗಿ ಪರಿಣಮಿಸಿದೆ.