ಅನಿಲ್ ಕುಂಬ್ಳೆಗೆ 'ಜಂಬೋ' ಅಂತ ಹೆಸರು ಬಂದಿದ್ದು ಹೇಗೆ ಗೊತ್ತಾ?

ಅನಿಲ್ ಕುಂಬ್ಳೆಗೆ ಜಂಬೋ ಎಂದು ನಾಮಕರಣ ಮಾಡಿದ್ದು ಯಾರು..? ಸ್ವತಃ ಅನಿಲ್ ಕುಂಬ್ಳೆ ಅವರೇ ನೀಡಿದ್ದಾರೆ..
ಅನಿಲ್ ಕುಂಬ್ಳೆ ಮತ್ತು ನವ ಜೋತ್ ಸಿಂಗ್ ಸಿದ್ದು (ಸಂಗ್ರಹ ಚಿತ್ರ)
ಅನಿಲ್ ಕುಂಬ್ಳೆ ಮತ್ತು ನವ ಜೋತ್ ಸಿಂಗ್ ಸಿದ್ದು (ಸಂಗ್ರಹ ಚಿತ್ರ)

ಬೆಂಗಳೂರು: ಕ್ರಿಕೆಟ್ ರಂಗದ "ಜಂಬೋ" ಯಾರಿಗೆ ತಿಳಿದಿಲ್ಲ ಹೇಳಿ.. ಕ್ರಿಕೆಟ್ ತಿಳಿದ ಯಾರನ್ನೇ ಕೇಳಿದರೂ ಅದು ಭಾರತ ತಂಡದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಎಂದು ಯಾರು  ಬೇಕಾದರೂ ಹೇಳುತ್ತಾರೆ. ಇಷ್ಟಕ್ಕೂ ಅನಿಲ್ ಕುಂಬ್ಳೆಗೆ ಜಂಬೋ ಎಂದು ನಾಮಕರಣ ಮಾಡಿದ್ದು ಯಾರು..? ಸ್ವತಃ ಅನಿಲ್ ಕುಂಬ್ಳೆ ಅವರೇ ನೀಡಿದ್ದಾರೆ.

ಕ್ರಿಕೆಟ್ ಅಭಿಮಾನಿಯೊಬ್ಬ ಅನಿಲ್ ಕುಂಬ್ಳೆ ಅವರಿಗೆ ಈ ಬಗ್ಗೆ ಟ್ವಿಟರ್ ನಲ್ಲಿ ಪ್ರಶ್ನೆ ಹಾಕಿದ್ದು, ಇದಕ್ಕೆ ಉತ್ತರಿಸಿರುವ ಅನಿಲ್ ಕುಂಬ್ಳೆ, ಮಾಜಿ ಕ್ರಿಕೆಟಿಗರೊಬ್ಬರ ಹೆಸರು ಹೇಳಿದ್ದಾರೆ. ಮಾಜಿ ಕ್ರಿಕೆಟಿಗ  ಬೇರಾರು ಅಲ್ಲ, ಸಿಕ್ಸರ್ ಸಿದ್ದು ಎಂದೇ ಖ್ಯಾತಿ ಗಳಿಸಿದ್ದ ನವಜೋತ್ ಸಿಂಗ್ ಸಿದ್ದು ಅಂತೆ..

ಕೋಟ್ಲಾದಲ್ಲಿ ನಡೆಯುತ್ತಿದ್ದ ಇರಾನಿ ಟ್ರೋಫಿ ವೇಳೆ ರೆಸ್ಟ್ ಆಫ್ ಇಂಡಿಯಾ ಪರವಾಗಿ ಅನಿಲ್ ಕುಂಬ್ಳೆ ಆಡುತ್ತಿದ್ದರು. ಅದೇ ತಂಡದಲ್ಲೇ ಸಿದ್ದು ಕೂಡ ಆಡುತ್ತಿದ್ದು, ಕುಂಬ್ಳೆ ಬೌಲಿಂಗ್ ವೇಳೆ  ಎಂದಿನಂತೆ ಸಿದ್ದು ಮಿಡ್ ಆನ್ ನಲ್ಲಿ ಫೀಲ್ಡಿಂಗ್ ಗೆ ನಿಂತಿದ್ದರು. ಈ ವೇಳೆ ಬೌಲಿಂಗ್ ಇಳಿದ ಕುಂಬ್ಳೆ ಅವರ ಒಂದು ಎಸೆತ ತೀವ್ರ ಪ್ರಮಾಣದಲ್ಲಿ ತಿರುವು ಪಡೆದು ಬೌನ್ಸ್ ಆಗಿತ್ತು. ಈ ವೇಳೆ  ಕುಂಬ್ಳೆಯನ್ನು ಉದ್ದೇಶಿಸಿದ ಸಿದ್ದು "ಜಂಬೋ ಜೆಟ್" ಎಸೆತ ಎಂದು ಶ್ಲಾಘಿಸಿದ್ದರು. ಬಳಿಕ ಜೆಟ್ ಕೈಬಿಟ್ಟು ಹೋಗಿ ಜಂಬೋ ಮಾತ್ರ ಉಳಿದುಕೊಂಡಿದೆ ಎಂದು ಕುಂಬ್ಳೆ ಹಾಸ್ಯಾತ್ಮಕವಾಗಿ  ಉತ್ತರಿಸಿದ್ದಾರೆ.

ಅಂತೆಯೇ ತಮ್ಮ ಜಂಬೋ ಹೆಸರು ಹೆಚ್ಚು ಖ್ಯಾತಿ ಗಳಿಸಿದ್ದು, 2006ರಲ್ಲಿ ಎಂದು ಕುಂಬ್ಳೆ  ಹೇಳಿಕೊಂಡಿದ್ದಾರೆ. 2006ರಲ್ಲಿ ಕಿಂಗ್ ಸ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಕುಂಬ್ಳೆ ಅವರು ಸ್ಪಿನ್ ನ ಫಲವಾಗಿ  ಭಾರತ ವೆಸ್ಟ್ ಇಂಡೀಸ್ ವಿರುದ್ಧ ಐತಿಹಾಸಿಕ ಸರಣಿ ಜಯ ದಾಖಲಿಸಿತ್ತು. ಆ ಪಂದ್ಯದಲ್ಲಿ ಕುಂಬ್ಳೆ 78 ರನ್ ನೀಡಿ 6 ವಿಕೆಟ್ ಗಳನ್ನು ಕಬಳಿಸಿದ್ದರು. 35 ವರ್ಷಗಳ ಬಳಿಕ ಭಾರತ ವೆಸ್ಟ್ ಇಂಡೀಸ್  ವಿರುದ್ಧ ಅವರ ತವರಿನಲ್ಲಿ ಮೊದಲ ಸರಣಿ ಜಯ ದಾಖಲಿಸಿತ್ತು.

ಕ್ರೀಡೆ ವಿಚಾರದಲ್ಲಿ ನಾನು ಕೆಟ್ಟ ವಿದ್ಯಾರ್ಥಿ?

ಇನ್ನು ಮತ್ತೋರ್ವ ಅಭಿಮಾನಿಯೊಬ್ಬ ಕ್ರೀಡೆಗಾಗಿ ನೀವು ಎಂದಾದರೂ ಕಾಲೇಜು ಬಂಕ್ ಮಾಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಕುಂಬ್ಳೆ ಕ್ರೀಡೆ ವಿಚಾರದಲ್ಲಿ ನಾನೊಬ್ಬ ಕೆಟ್ಟ  ವಿದ್ಯಾರ್ಥಿ ಎಂದು ಉತ್ತರಿಸಿದ್ದಾರೆ. ಏಕೆಂದರೆ "ನಾನು ಎಂದಿಗೂ ಕ್ರೀಡೆಗಾಗಿ ತರಗತಿಗಳನ್ನು ಬಂಕ್ ಮಾಡಿಲ್ಲ. ಆ ಸಂದರ್ಭದಲ್ಲಿ ನಾನೇ ಅಂತಹ ಒಳ್ಳೆಯ ಕ್ರೀಡಾಪಟುವಲ್ಲ. ಇದೇ  ಕಾರಣಕ್ಕಾಗಿ ನನ್ನ ಸ್ನೇಹಿತರು ನನ್ನ ವಿರುದ್ಧ ಕೋಪಗೊಳ್ಳುತ್ತಿದ್ದರು ಎಂದು ಕುಂಬ್ಳೆ ಉತ್ತರಿಸಿದ್ದಾರೆ.

ಇನ್ನು ಫೋಟೋಗ್ರಫಿಯಲ್ಲಿ ಆಸಕ್ತಿ ಹೊಂದಿರುವ ಕುಂಬ್ಳೆ ವೆಸ್ಟ್ ಇಂಡೀಸ್ ಗೂ ತಮ್ಮ ಕೆಮೆರಾವನ್ನು ಒಯ್ಯುವುದಾಗಿ ತಿಳಿಸಿದ್ದಾರೆ. ವಿಂಡೀಸ್  ಸುಂದರ ಬೀಚ್ ಗಳು ಮತ್ತು ಮೈದಾನದ ರೋಚಕ  ಕ್ಷಣಗಳನ್ನು ಸೆರೆ ಹಿಡಿಯಲು ಉತ್ಸುಕನಾಗಿದ್ದೇನೆ. ಮೈದಾನದಲ್ಲಿ ಗೆಲುವಿನ ಕ್ಷಣ ತುಂಬಾ ರೋಚಕವಾಗಿರುತ್ತದೆ ಎಂದು ಕುಂಬ್ಳೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com