ನವದೆಹಲಿ4: ರಾಷ್ಟ್ರೀಯ ಸುದ್ದಿವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಕೆಲವು ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ಮತ ಹಾಕಲು ಹಣದ ಬೇಡಿಕೆಯಿಟ್ಟಿರುವ ಬಗ್ಗೆ ವರದಿ ನೀಡುವಂತೆ ಕೇಂದ್ರ ಚುನಾವಣಾ ಆಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಶಾಸಕರ ವಿರುದ್ಧದ ಸ್ಟಿಂಗ್ ಆಪರೇಷನ್ ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೇಂದ್ರ ಚುನಾವಣಾ ಆಯೋಗ ಇಂದು ಮುಖ್ಯ ಚುನಾವಣಾ ಆಯುಕ್ತ ಡಾ.ನಸಿಮ್ ಜೈದಿ ನೇತೃತ್ವದಲ್ಲಿ ಸಭೆ ನಡೆಸಿತ್ತು. ಸಭೆಯ ಬಳಿಕ ಜೈದಿ ಅವರು ಕುಟುಕು ಕಾರ್ಯಾಚರಣೆ ಬಗ್ಗೆ ವರದಿ ನೀಡುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಅನಿಲ್‌ಕುಮಾರ್ ಕುಮಾರ್ ಝಾ ಸೂಚಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗ ನೀಡುವ ವರದಿ ಆಧಾರದ ಮೇಲೆ ರಾಜ್ಯಸಭೆ ಚುನಾವಣೆ ಭವಿಷ್ಯ ನಿಂತಿದೆ. ಒಂದು ವೇಳೆ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿರುವಂತೆ ಶಾಸಕರು ಮತ ಹಾಕಲು ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಸಾಬೀತಾದರೆ ಚುನಾವಣಾ ಆಯೋಗ ರಾಜ್ಯಸಭೆ ಚುನಾವಣೆಯನ್ನು ಮುಂದೂಡುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಜಾ ಅವರು, ಮತಕ್ಕಾಗಿ ಲಂಚ ಸ್ಟಿಂಗ್ ಆಪರೇಷನ್ ಅನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಕಾರ್ಯಾಚರಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ವಾಹಿನಿಗೆ ಸೂಚಿಸಲಾಗಿದೆ ಎಂದು ಹೇಳಿದ್ದರು.
ಇಂಡಿಯಾ ಟುಡೆ ಮತ್ತು ಟೈಮ್ಸ್ ನೌ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ರಾಜ್ಯದ ಆರು ಮಂದಿ ಶಾಸಕರು ಹಾಗೂ ಇಬ್ಬರು ರಾಜ್ಯಸಭಾ ಚುನಾವಣಾ ಅಭ್ಯರ್ಥಿಗಳು ನೋಟಿಗಾಗಿ ವೋಟು ಡೀಲ್ ಕುದುರಿಸಿರುವುದು ಬಹಿರಂಗಗೊಂಡಿದೆ.
ರಾಜ್ಯ ವಿಧಾನಸಭೆಯಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಜೂನ್ 11ರಂದು ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಜೆಡಿಎಸ್, ಬಿಜೆಪಿ ತಲಾ ಒಂದು ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ.