ವಿಯೆನ್ನಾ: ಭಾರತವನ್ನು ಪರಮಾಣು ಪೂರೈಕೆದಾರರ ಒಕ್ಕೂಟಕ್ಕೆ ಸೇರಿಸಲು ವಿಶ್ವಸಮುದಾಯದ ಬೆಂಬಲದ ನಡುವೆಯೂ ಚೀನಾ ಮತ್ತು ಪಾಕಿಸ್ತಾನ ದೇಶಗಳು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ವಿಯೆನ್ನಾದಲ್ಲಿ ನಡೆದ ಸಭೆ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿದ್ದು, ಮುಂಬರುವ ಸಿಯೋಲ್ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಎನ್ ಎಸ್ ಜಿ ಒಕ್ಕೂಟಕ್ಕೆ ಭಾರತದ ಸೇರ್ಪಡೆ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೊಳಗಾಗುತ್ತಿದ್ದು, ಚೀನಾ ಮತ್ತು ಪಾಕಿಸ್ತಾನದ ಜಾಡಿನಲ್ಲಿ ಭಾರತದ ವಿರುದ್ಧ ನಿಲುವು ತಳೆದಿದ್ದ ದೇಶಗಳು ಇದೀಗ ಕ್ರಮೇಣ ಭಾರತದ ಪರ ನಿಲುವು ತಳೆಯುತ್ತಿವೆ. 48 ದೇಶಗಳ ಸದಸ್ಯತ್ವ ಹೊಂದಿರುವ ಎನ್‌ಎಸ್‌ಜಿ ಒಕ್ಕೂಟ್ಟಕ್ಕೆ ಭಾರತವನ್ನು ಸೇರ್ಪಡೆ ಗೊಳಿಸಲು ಆರು ದೇಶಗಳು ವಿರೋಧ ವ್ಯಕ್ತಪಡಿಸುತ್ತಿದ್ದವು. ಈ ಪೈಕಿ ಚೀನಾ ಮತ್ತು ಪಾಕಿಸ್ತಾನ ದೇಶಗಳು ಮುಂಚೂಣಿಯಲ್ಲಿದ್ದರೆ, ನ್ಯೂಜಿಲೆಂಡ್, ಐರ್ಲೆಂಡ್, ಟರ್ಕಿ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರಿಯಾ ಕೂಡ ವಿರೋಧಿಸುತ್ತಿದ್ದವು. ಆದರೆ ಈಗ ಮೂಲಗಳ ಪ್ರಕಾರ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಟರ್ಕಿ ತಮ್ಮ ನಿಲುವನ್ನು ಸಡಿಲಿಸಿದ್ದು, ಭಾರತದ ಸಂಧಾನದ ಫಲವಾಗಿ ಈ ದೇಶಗಳು ಭಾರತದ ತಮ್ಮ ನಿಲುವು ಬದಲಿಸಿವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಎನ್‌ಎಸ್‌ಜಿಗೆ ಸೇರ್ಪಡೆ ಸಾಧ್ಯತೆಯನ್ನು ಹೆಚ್ಚಿಸಿದೆ.
ಸಿಯೋಲ್ ನಲ್ಲಿ ಅಂತಿಮ ನಿರ್ಧಾರ
ಇದೇ ವೇಳೆ ಅಮೆರಿಕದ ವಿಯೆನ್ನಾದಲ್ಲಿ ನಡೆದ ಸಭೆಯಲ್ಲಿ ಭಾರತವನ್ನು ಎನ್ ಎಸ್ ಜಿ ಒಕ್ಕೂಟಕ್ಕೆ ಸೇರಿಸುವ ಕುರಿತು ಯಾವದೇ ನಿರ್ಧಾರ ಕೈಗೊಳ್ಳುವಲ್ಲಿ ಸಭೆ ವಿಫಲವಾಗಿದ್ದು, ಮುಂದಿನ ತಿಂಗಳು ಸಿಯೋಲ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ವಿಯೆನ್ನಾದಲ್ಲಿ ನಡೆದ ಸಭೆ ವೇಳೆ ಚೀನಾ ಮತ್ತು ಪಾಕಿಸ್ತಾನ ಭಾರತವನ್ನು ಎನ್ ಎಸ್ ಜಿ ಒಕ್ಕೂಟಕ್ಕೆ ಸೇರಿಸಲು ವಿರೋಧವ್ಯಕ್ತಪಡಿಸಿದ್ದವು. ಇದರ ಜೊತೆಗೆ ನ್ಯೂಜಿಲೆಂಡ್, ಐರ್ಲೆಂಡ್, ಟರ್ಕಿ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರಿಯಾ ದೇಶಗಳು ತಮ್ಮ ನಿಲುವು ಪ್ರಕಟಿಸುವಲ್ಲಿ ವಿಫಲವಾಗಿವೆ. ಪ್ರಸ್ತುತ ಈ ದೇಶಗಳು ಭಾರತದ ಪರ ನಿಲುವು ಹೊಂದಿದ್ದರೂ ನಿಗದಿತ ಸಮಯದಲ್ಲಿ ತಮ್ಮ ನಿರ್ಧಾರ ಪ್ರಕಟಿಸುವಲ್ಲಿ ತಡವಾದ ಹಿನ್ನಲೆಯಲ್ಲಿ ವಿಯೆನ್ನಾ ಸಭೆ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ.
ಎನ್ ಎಸ್ ಜಿ ಒಕ್ಕೂಟಕ್ಕೆ ಯಾವುದೇ ದೇಶವನ್ನು ಸೇರ್ಪಡೆಗೊಳಿಸಲು ಎಲ್ಲ ಸದಸ್ಯ ರಾಷ್ಟ್ರಗಳ ಒಪ್ಪಿಗೆ ಬೇಕು. ಯಾವುದೇ ಒಂದು ರಾಷ್ಟ್ರ ವಿರೋಧಿಸಿದರೂ ಸೇರ್ಪಡೆ ಅಸಾಧ್ಯ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಚೀನಾ ಭಾರತವನ್ನು ವಿರೋಧಿಸುತ್ತಿದ್ದು, ಎನ್ ಎಸ್ ಜಿ ಒಕ್ಕೂಟಕ್ಕೆ ಸೇರುವ ಎಲ್ಲ ಅರ್ಹತೆಗಳ ಹೊರತಾಗಿಯೂ ಭಾರತ ಯಾವುದೇ ಕಾರಣಕ್ಕೂ ಎನ್ ಎಸ್ ಜಿ ಒಕ್ಕೂಟ ಸೇರಬಾರದು ಎಂಬುದು ಚೀನಾ ನಿಲುವಾಗಿದೆ.
ಇದೇ ಜೂನ್ 24ರಂದು ಸಿಯೋಲ್ ನಲ್ಲಿ ಎನ್ ಎಸ್ ಜಿ ಸಮಗ್ರ ಸದಸ್ಯರ ಸಭೆ ನಡೆಯಲಿದ್ದು, ಅಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
Advertisement