

ನವದೆಹಲಿ: ಕಪ್ಪುಹಣ ಘೋಷಣೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯನ್ನು ಫೇರ್ ಅಂಡ್ ಲೌಲಿ ಯೋಜನೆ ಎಂದು ಟೀಕಿಸಿದ್ದ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಲು ಬಿಜೆಪಿ ನಿರ್ಧರಿಸಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ನಾಯಕ, ಸಂಸದ ಅರ್ಜುನ್ ಮೆಘ್ವಾಲ್, ಫೇರ್ ಆಂಡ್ ಲೌಲಿ ಜಾಹಿರಾತಿನ ಬಗ್ಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಫೇರ್ ಆಂಡ್ ಲೌಲಿ ಜಾಹಿರಾತು ವರ್ಣಭೇದ ನೀತಿ ಅನುಸರಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದ ಹಿನ್ನೆಲೆಯಲ್ಲಿ ಜಾಹಿರಾತನ್ನು ರದ್ದುಗೊಳಿಸಲಾಗಿತ್ತು. ಆದರೆ ರಾಹುಲ್ ಗಾಂಧಿ ವರ್ಣಭೇದ ನೀತಿ ಅನುಸರಿಸುವ ಜಾಹಿರಾತನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ಯೋಜನೆಯನ್ನು ಟೀಕಿಸಿದ್ದು ಅವರಿಗೆ ಬಿಜೆಪಿ ನೋಟಿಸ್ ಜಾರಿ ಮಾಡಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಂತಹ ಪುರಾತನ ಪಕ್ಷದ ಉಪಾಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಅರ್ಜುನ್ ಮೇಘ್ವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕಪ್ಪು ಹಣವನ್ನು ಬಿಳಿ ಮಾಡಲು ಫೇರ್ ಆಂಡ್ ಲವ್ಲಿ ಯೋಜನೆ ಜಾರಿಗೆ ತಂದಿದೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಯೋಜನೆಯನ್ನು ಟೀಕಿಸಿದ್ದರು.