ನವದೆಹಲಿ: ಸಿಬಿಐ ದೂರು ಆಧರಿಸಿ ಜಾರಿ ನಿರ್ದೇಶನಾಲಯ(ಇಡಿ)ವು ಸೋಮವಾರ ಕಿಂಗ್ ಫಿಶರ್ ಏರ್ ಲೈನ್ಸ್ ಮುಖ್ಯಸ್ಥ ವಿಜಯ್ ಮಲ್ಯ ಅವರ ವಿರುದ್ಧ ಹಣ ದುರುಪಯೋಗ ಕೇಸ್ ದಾಖಲಿಸಿದೆ.
ವಿಜಯ್ ಮಲ್ಯ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ರೀತಿ ವಿದೇಶಗಳಿಗೆ ಪಲಾಯನ ಮಾಡದಿರಲಿ ಎಂಬ ಉದ್ದೇಶದಿಂದ ಇಡಿ ಹಣ ದುರುಪಯೋಗ ನಿಗ್ರಹ ಕಾಯ್ದೆಯಡಿ 'ಕಿಂಗ್ ಆಫ್ ಗೂಡ್ ಟೈಮ್ಸ್' ವಿರುದ್ಧ ಪ್ರಾಥಮಿಕ ತನಿಖೆ ಆರಂಭಿಸಿದೆ. ಇದರೊಂದಿಗೆ ವಿಜಯ್ ಮಲ್ಯ ಭಾರತ ಹಾಗೂ ವಿದೇಶಗಳಲ್ಲಿ ಹೊಂದಿರುವ ಆಸ್ತಿಗಳನ್ನು ಪಟ್ಟಿ ಮಾಡಲಿದೆ.
ಈಗಾಗಲೇ ಮಲ್ಯ ಪ್ರಕರಣದ ಬಗ್ಗೆ ಸಿಬಿಐ ಕೂಡಾ ತನಿಖೆ ನಡೆಸುತ್ತಿದ್ದು, ಈಗ ಹಣ ದುರುಪಯೋಗ ನಿಗ್ರಹ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ವಿಜಯ್ ಮಲ್ಯ ವಿರುದ್ಧ ದೂರು ದಾಖಲಿಸಿದ್ದು, ಈ ಮೂಲಕ ಮಲ್ಯ ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಂತಾಗಿದೆ.
ದೂರು ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ ಮಲ್ಯ ಅವರನ್ನು ಶೀಘ್ರವೇ ಮುಂಬೈನಲ್ಲಿ ವಿಚಾರಣೆಗೊಳಪಡಿಸುವ ಸಾಧ್ಯತೆ ಇರುವುದಾಗಿ ವರದಿಗಳು ತಿಳಿಸಿವೆ.
ಈ ಮಧ್ಯೆ ಬೃಹತ್ ಸಾಲ ಮರುಪಾವತಿಸದ ಉದ್ಯಮಿ ವಿಜಯ್ ಮಲ್ಯ ಅವರ ಬಂಧನ ಕೋರಿ ಭಾರತೀಯ ಸ್ಟೇಟ್ ಬ್ಯಾಂಕ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಸಾಲ ವಸೂಲಾತಿ ನ್ಯಾಯಾಧೀಕರಣ(ಡಿಆರ್‌ಟಿ) ಇಂದು ತನ್ನ ಆದೇಶ ಹೊರಡಿಸಲಿದೆ.