

ನವದೆಹಲಿ: ದೇಶದ್ರೋಹ ಆರೋಪದ ಮೇಲೆ ಬಂಧಿತರಾಗಿದ್ದ ಜೆ ಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಹೊರಬಂದಿದ್ದರು. ಅವರು ಪಶ್ಚಿಮ ಬಂಗಾಳ ಮತ್ತು ಕೇರಳ ವಿಧಾನ ಸಭಾ ಚುನಾವಣೆಗಳಲ್ಲಿ ಎಡಪಕ್ಷಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂಬ ಸುದ್ದಿ ಎದ್ದಿತ್ತು. ಈಗ ಚುನಾವಣೆಗಳಲ್ಲಿ ಪ್ರಚಾರ ಮಾಡುವುದಿಲ್ಲ ಎಂಬ ಸುಳಿವು ನೀಡಿದ್ದಾರೆ ಕನ್ಹಯ್ಯ.
"ಮುಖ್ಯವಾಹಿನಿಯ ರಾಜಕೀಯ ನನ್ನ ಆಸಕ್ತಿ ಕ್ಷೇತ್ರವಲ್ಲ ಎಂದು ನಾನಾಗಲೇ ಸ್ಪಷ್ಟಪಡಿಸಿದ್ದೇನೆ. ನಾನು ವಿದ್ಯಾರ್ಥಿ ಮತ್ತು ನನ್ನ ಸಂಶೋಧನೆ ಮುಗಿಸಿದ ಮೇಲೆ ಉಪನ್ಯಾಸಕನಾಗಲು ಬಯಸುತ್ತೇನೆ. ಆದರೆ ನನ್ನ ಸಾಮಾಜಿಕ ಹೋರಾಟವನ್ನು ಮುಂದುವರೆಸಲಿದ್ದೇನೆ.
"ನನ್ನ ಇಬ್ಬರು ಗೆಳೆಯರು ಇನ್ನೂ ಜೈಲಿನಲ್ಲಿದ್ದಾರೆ. ರೋಹಿತ ವೇಮುಲಾ ಪ್ರಕರಣ, ಅಲಹಾಬಾದ ವಿಶ್ವವಿದ್ಯಾಲಯ ವಿವಾದ ಸೇರಿದಂತೆ ಹಲವಾರು ವಿಷಯಗಳನ್ನು ನಾವು ಎತ್ತಿದ್ದೇವೆ. ವಿದ್ಯಾರ್ಥಿಗಳಾಗಿ ನಮಗೆ ಮಾಡಲು ಸಾಕಷ್ಟು ಉಳಿದಿರುವುದರಿಂದ, ಚುನಾವಣಾ ಪ್ರಚಾರಕ್ಕಾಗಿ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇಲ್ಲ" ಎಂದು ಅವರು ತಿಳಿಸಿದ್ದಾರೆ.
ಬಿಡುಗಡೆಯ ನಂತರ ಜೆ ಎನ್ ಯು ನಲ್ಲಿ ನೀಡಿದ್ದ ಬೆಂಕಿ ಭಾಷಣದ ನಂತರ, ಸಿ ಪಿ ಎಂ ಪ್ರಧಾನ ಕಾರ್ಯದರ್ಶಿ ಸೀತಾರಮ್ ಯೆಚೂರಿ ಅವರು, ಕನ್ಹಯ್ಯ ವಿಧಾನ ಸಭಾ ಚುನಾವಣೆಗಳಲ್ಲಿ ಎಡ ಪಕ್ಷಗಳ ಪರವಾಗಿ ಮತ ಯಾಚಿಸಲಿದ್ದಾರೆ ಎಂದಿದ್ದರು.
ಆದರೆ ಜಾಮೀನಿ ವಿಷಯ ಮುಂದು ಮಾಡಿ ಅವರು ಪಶ್ಚಿಮ ಬಂಗಾಳ ಅಥವಾ ಕೇರಳಕ್ಕೆ ಪ್ರವಾಸ ಮಾಡುವುದಿಲ್ಲ ಎಂದು ಕೂಡ ಅವರು ತಿಳಿಸಿದ್ದರು.
ಜೈಲಿನಿಂದ ಬಿಡುಗಡೆಯಾದ ಮೇಲೆ ಕನ್ಹಯ್ಯ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದಿದ್ದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರ ಮೇಲು ಟೀಕಾ ಪ್ರಹಾರ ನಡೆಸಿರುವ ಕನ್ಹಯ್ಯ "ನಾನು ಮತ್ತು ಇತರ ಜೆ ಎನ್ ಯು ವಿದ್ಯಾರ್ಥಿಗಳು ಬಿಟ್ಟಿ ಪ್ರಚಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. ಅದನ್ನು ಬಿಟ್ಟು ಓದುವಂತೆ ನಮಗೆ ಸಲಹೆ ನೀಡಿದ್ದಾರೆ. ಆದರೆ ನಾನು ಅವರಿಗೆ ಹೇಳಬಯಸುವುದೆಂದರೆ ನಾವು ಸಾಮಾಜಿಕ ಹೋರಾಟ ಮಾಡುತ್ತಿದ್ದೇವೆ, ಸರ್ಕಾರ ರಾಜಕೀಯ ಮಾಡುತ್ತಿದೆ. ಇವೆರಡಕ್ಕೂ ವ್ಯತ್ಯಾಸ ಅವರು ತಿಳಿದಿದ್ದಾರೆಯೇ? ಅಂತಹ ಪ್ರತಿಕ್ರಿಯೆ ನೀಡುವ ಮೊದಲು ಇವುಗಳ ವ್ಯತ್ಯಾಸ ಅವರು ತಿಳಿಯಬೇಕು" ಎಂದಿದ್ದಾರೆ.
ವೆಂಕಯ್ಯ ನಾಯ್ಡು ಕೂಡ ಎ ಬಿ ವಿ ಪಿ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿ ನಾಯಕರಾಗಿದ್ದವರು. ಅವರು ಇಂತಹ ಮಾತುಗಳನ್ನಾಡಿರುವುದು ವಿಪರ್ಯಾಸ ಎಂದು ಕೂಡ ಕನ್ಹಯ್ಯ ಹೇಳಿದ್ದಾರೆ.
"ಜೆ ಎನ್ ಯು ಗೆ ಪ್ರವೇಶ ಪಡೆಯಲು ಎಷ್ಟು ಕಷ್ಟ ಎಂದು ಇಡೀ ರಾಷ್ಟ್ರಕ್ಕೆ ಗೊತ್ತು. ಇಲ್ಲಿ ಓದದೆ ಉಳಿಯಲು ಸಾಧ್ಯವೇ? ನಮ್ಮ ಗುರಿ ಓದುವುದು ಮತ್ತು ಹೋರಾಟ. ನಮ್ಮ ಬೌದ್ಧಿಕತೆಯ ಬಗ್ಗೆ ಭಯವಿರುವವರು ಮಾತ್ರ ಇದನ್ನು ರಾಜಕೀಯ ಎನ್ನುತ್ತಾರೆ" ಎಂದು ಕೂಡ ಬಿಹಾರದ ವಿದ್ಯಾರ್ಥಿ ಹರಿಹಾಯ್ದಿದ್ದಾರೆ.