

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೊತಿಗಿನ ಭೇಟಿ ಧನಾತ್ಮಕವಾಗಿತ್ತು ಎಂದಿದ್ದಾರೆ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ .
"ಇದು ಪ್ರಧಾನಿ ಜೊತೆಗಿನ ಧನಾತ್ಮಕ ಭೇಟಿಯಾಗಿತ್ತು ಮತ್ತು ಶ್ರೀನಗರಕ್ಕೆ ಹಿಂದಿರುಗಿ ಮುಂದಿನ ನಡೆ ನಿರ್ಧರಿಸುತ್ತೇನೆ" ಎಂದು ಪ್ರಧಾನಿಯವರ ಅಧಿಕೃತ ನಿವಾಸ ೭ ರೇಸ್ ಕೋರ್ಸ್ ರಸ್ತೆಯ, ಹೊರಗೆ ಮಾಧ್ಯಮಗಳಿಗೆ ಮುಫ್ತಿ ತಿಳಿಸಿದ್ದಾರೆ.
"ಪ್ರಧಾನಿ ಜೊತೆಗಿನ ಭೇಟಿಯ ನಂತರ ನನಗೆ ಸಂತಸವಾಗಿದೆ" ಎಂದು ಕೂಡ ಅವರು ತಿಳಿಸಿದ್ದಾರೆ.
"ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಎರಡು ಮೂರು ತಿಂಗಳುಗಳಿಂದಲೂ ಮಾತುಕತೆ ಮುರಿದುಬಿದ್ದಿವೆ. ಈ ಭೇಟಿಯ ನಂತರ ಭರವಸೆ ಮೂಡಿದೆ" ಎಂದು ದಿವಂಗತ ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಅವರ ಪುತ್ರಿ ಹೇಳಿದ್ದಾರೆ.
ಬಿಜೆಪಿ ಮತ್ತು ಪಿಡಿಪಿ ಸೇರಿ ರಚಿಸಿದ್ದ ಸರ್ಕಾರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ನಿಧನದ ನಂತರ ಮುರಿದು ಬಿದ್ದಿತ್ತು.
ಗುರುವಾರ ಪಕ್ಷದ ಶಾಸಕಾಂಗ ಸಭೆ ಕರೆದಿರುವ ಮೆಹಬೂಬಾ ಮುಫ್ತಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.