

ಬ್ರಸ್ಸಲ್ಸ್: ಶುಕ್ರವಾರ ಮತ್ತೊಂದು ಭಯೋತ್ಪಾದನ ವಿರೋಧಿ ದಾಳಿ ನಡೆಸಿದ ಬೆಲ್ಜಿಯಂ ಪೊಲೀಸರು ಶಂಕಿತನೊಬ್ಬನನ್ನು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ದಾಳಿಯಲ್ಲಿ ಶಂಕಿತನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಸ್ಕಾರ್ಬೀಕ್ ಮೇಯರ್ ಬರ್ನಾರ್ಡ್ ಕ್ಲೆರ್ಫ್ಯಾಟ್ ಹೇಳಿದ್ದಾರೆ,
"ಈ ಪೊಲೀಸ್ ದಾಳಿಯಲ್ಲಿ ಶಂಕಿತನ ಕಾಲಿಗೆ ಸಣ್ಣ ಗಾಯವಾಗಿದೆ " ಎಂದು ಪ್ರಾದೇಶಿಕ ಅಧಿಕಾರಿ ಧೃಢೀಕರಿಸಿದ್ದಾರೆ.
ಫ್ರಾನ್ಸ್ ನಲ್ಲಿ ನಡೆಯಬಹುದಾಗಿದ್ದ ಸಂಭವನೀಯ ದಾಳಿ ತಡೆಯಲಿ ಪೊಲೀಸರು ಈ ಪ್ರತಿ ದಾಳಿ ನಡೆಸಿದ್ದು, ಬಾಂಬ್ ನಿಷ್ಕ್ರಿಯಗೊಳಿಸುವಾಗ ಸಣ್ಣ ಸ್ಫೋಟವಾಗಿದೆ ಎಂದು ಹೇಳಿದ್ದಾರೆ.
ಪ್ಯಾರಿಸ್ ನಲ್ಲಿ ಗುರುವಾರ 34 ವರ್ಷದ ರೇಡ ಕ್ರಿಕೆಟ್ ಎಂಬುವವರನ್ನು ಬಂಧಿಸಿದ ಹಿನ್ನಲೆಯಲ್ಲಿ ಬ್ರಸ್ಸಲ್ಸ್ ನಲ್ಲಿ ಪೊಲೀಸರು ಈ ಹುಡುಕಾಟ ನಡೆಸಿದ್ದಾರೆ ಎಂದು ಫ್ರೆಂಚ್ ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರದೇಶವನ್ನು ಪೊಲೀಸರು ಮುತ್ತಿಗೆ ಹಾಕಿದ್ದು, ಯಾರು ಹೊರಹೋಗದಂತೆ ತಡೆದಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ಬ್ರಸಲ್ಸ್ ವಿಮಾನ ನಿಲ್ದಾಣ ಮತ್ತು ಮೆಟ್ರೊ ನಿಲ್ದಾಣದಲ್ಲಿ ಸ್ಫೋಟಗೊಂಡ ಮೇಲೆ ಸ್ಕಾರ್ಬೀಕ್ ಬಾಂಬ್ ಉತ್ಪಾದನಾ ಕಾರ್ಖಾನೆಯನ್ನು ಪೊಲೀಸರು ಪತ್ತೆ ಹಚ್ಚಿದ್ದರು. ವಿಮಾನ ನಿಲ್ದಾಣದಲ್ಲಿ ದಾಳಿ ನಡೆಸಿದವರು ಈ ಪ್ರದೇಶದಿಂದಲೇ ಅಂದು ಬೆಳಗ್ಗೆ ಹೊರಟ್ಟಿದ್ದರು ಎಂದು ತಿಳಿದುಬಂದಿದೆ.