

ಲಕ್ನೌ: ಉತ್ತರಪ್ರದೇಶದ ಪ್ರಾಥಮಿಕ ಶಾಲೆಗಳಲ್ಲಿ ಇನ್ನು ಮುಂದು ರಾಷ್ಟ್ರಗೀತೆ 'ಜನ ಗಣ ಮನ'ವನ್ನು ಕಡ್ಡಾಯವಾಗಿ ಪ್ರತಿದಿನ ಹಾಡಬೇಕಾಗಿದೆ.
ಸರ್ಕಾರದ ಈ ನೂತನ ನಿರ್ದೇಶನದ ಪ್ರಕಾರ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ್ ಟ್ಯಾಗೋರ್ ರಚಿಸಿರುವ ರಾಷ್ಟ್ರಗೀತೆಯನ್ನು ಪ್ರಾಥಮಿಕ ಶಾಲೆಗಳಲ್ಲಿ ಹಾಡುವುದು ಕಡ್ಡಾಯ ಎಂದು ತಿಳಿಸಿದೆ.
ಪ್ರಾಥಮಿಕ ಶಿಕ್ಷಣ ನಿರ್ದೇಶನಾಲಯ ಹೊಸ ಶೈಕ್ಷಣಿಕ ವರ್ಷಕ್ಕೆ ಜಾರಿಗೆ ತಂದಿರುವ ನಿಯಮದ ಪ್ರಕಾರ ಪ್ರತಿ ಬುಧವಾರವನ್ನು 'ಸ್ವಚ್ಛ ದಿನ'ವಾಗಿ ಕೂಡ ಆಚರಿಸಬೇಕಿದೆ.
ಪ್ರಾಥಮಿಕ ಶಾಲೆಗಳು ವರ್ಷಕ್ಕೆ ೨೦೦ ದಿವಸ ಕೆಲಸ ಮಾಡಲಿದ್ದು, ಹಿರಿಯ ಪ್ರಾಥಮಿಕ ಶಾಲೆಗಳು ೨೨೦ ದಿವಸ ತರಗತಿಗಳನ್ನು ನಡೆಸಲಿವೆ ಎಂದು ನಿರ್ದೇಶನಾಲಯ ತಿಳಿಸಿದೆ.
ವಾರದ ಮೊದಲ ನಾಲ್ಕು ದಿನಗಳಿಗೆ ಕ್ರೀಡಾ ತರಗತಿಯನ್ನು ಕಡ್ಡಾಯಗೊಳಿಸಿದ್ದು, ಇನ್ನುಳಿದ ವಾರದ ದಿನಗಳಲ್ಲಿ ಸ್ಕೌಟ್ ಮತ್ತು ಗೈಡ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ.
ಅಲ್ಲದೆ ಶಿಕ್ಷಣದ ಹೊರತಾಗಿ ಇತರ ಚಟುವಟಿಕೆಗಳಾದ ಚರ್ಚಾಸ್ಪರ್ಧೆ, ಚಿತ್ರ ಬಿಡಿಸುವುದು, ಅಂತ್ಯಾಕ್ಷರಿಯನ್ನು ಉತ್ತೇಜಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಹಮ್ಮಿಕೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.