ನವದೆಹಲಿ: ಎಲ್ಲಾ ರಾಜ್ಯಗಳಲ್ಲೂ ತನ್ನದೇ ಅಧಿಕಾರ ಚಲಾಯಿಸಬೇಕೆಂದಿರುವ ಬಿಜೆಪಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಲೋಕತಂತ್ರ ಬಚಾವೋ ನಡಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಎಲ್ಲಾ ರಾಜ್ಯಗಳಲ್ಲಿ ತನ್ನದೇ ಅಧಿಕಾರ ಇರಬೇಕು ಎನ್ನುವ ದುರಾಸೆ ಹೊಂದಿದೆ. ಹಾಗಾಗಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳನ್ನು ಕೊಲ್ಲುತ್ತಿದೆ ಎಂದು ದೂರಿದ್ದಾರೆ.
ಪ್ರಜಾಪ್ರಭುತ್ವವನ್ನು ಗಣನೆಗೆ ತೆಗೆದುಕೊಳ್ಳದ ಬಿಜೆಪಿಗೆ, ಅಧಿಕಾರ ಕಸಿದುಕೊಳ್ಳುವುದರತ್ತ ಚಿತ್ತ. ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ಮಾನವೀಯತೆಯ ಮೂಲ ತತ್ವಗಳನ್ನು ಕಾಪಾಡುವಲ್ಲಿ ತಮ್ಮ ರಕ್ತವನ್ನು ಹರಿಸಿದ್ದು, ಪ್ರಾಣವನ್ನೇ ಮುಡುಪಾಗಿಸಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರ ವಿರೋಧಿಯಾಗಿದೆ. ರಾಷ್ಟ್ರ ವಿರೋಧಿಗಳ ವಿರುದ್ಧ ಹೋರಾಟ ನಡೆಸುವುದು ನಮಗೆ ಹೊಸತೇನಲ್ಲ. ಹೋರಾಟ ನಡೆಸುವುದನ್ನು ಜೀವನ ಹೇಳಿಕೊಟ್ಟಿದೆ. ಆ ಹೋರಾಟದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ಅವರಿಗೆ ತಿಳಿದಿಲ್ಲ ನಾವು ಯಾವ ರೀತಿ ಮುಂದೆ ಬಂದಿದ್ದೇವೆಂದು ಎಂದು ಅವರು ಹೇಳಿದ್ದಾರೆ.
ಮೊದಿ ಸರ್ಕಾರದ ವಿರುದ್ಧ ಕಿಡಿ ಕಾರಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ದೇಶ ಕೇವಲ ಇಬ್ಬರಿಂದ ಮುನ್ನಡೆಯುತ್ತಿದೆ. ಅದು ನರೇಂದ್ರ ಮೋದಿ ಮತ್ತು ಆರ್ ಎಸ್ ಎಸ್ ಮೋಹನ್ ಭಗವತ್ ರಿಂದ ಮಾತ್ರ. ಭಾರತದಲ್ಲಿ ಕೇವಲ ಇಬ್ಬರು ವ್ಯಕ್ತಿಗಳ ಹೆಸರು ಕೇಳುತ್ತದೆ. ಅದು ನರೇಂದ್ರ ಮೋದಿಜಿ ಮತ್ತು ಮೋಹನ್ ಭಗವತ್ ಜಿ ಎಂದು ಅವರು ಕಿಡಿಕಾರಿದ್ದರು.
ನರೇಂದ್ರ ಮೋದಿ ಮತ್ತು ಮೋಹನ್ ಭಗವತ್ ವಿರುದ್ಧ ಧ್ವನಿ ಎತ್ತುವವರಿದ್ದರೆ, ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಕೇಂದ್ರ ಸರ್ಕಾರ ಎಲ್ಲಾ ಕಾನೂನುಗಳನ್ನು ಮುರಿದು ಅರುಣಾಚಲದಲ್ಲಿ ಕಾಂಗ್ರೆಸ್ ಆಡಳಿತವನ್ನು ಅಸ್ಥಿರಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಲೋಕತಂತ್ರ ಬಚಾವೋ ನಡಿಗೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಮನಮೋಹನ್ ಸಿಂಗ್, ಅಂಬಿಕಾ ಸೋನಿ ಸೇರಿದಂತೆ ನೂರಾರು ಬೆಂಬಲಿಗರು ಪಾಲ್ಗೊಂಡಿದ್ದರು.