ನವದೆಹಲಿ: 2012ರ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಶುಕ್ರವಾರ ಉದ್ಯಮಿ ವಿಜಯ್ ಮಲ್ಯ ಅವರ ವಿರುದ್ಧ ಒಂದೇ ದಿನದಲ್ಲಿ ಎರಡನೇ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಸುಮೀತ್ ಆನಂದ್ ಅವರು ಪದೇ ಪದೇ ಸಮನ್ಸ್‌ಗಳಿಂದ ತಪ್ಪಿಸಿಕೊಳ್ಳುತ್ತಿರುವ ವಿಜಯ್ ಮಲ್ಯ ವಿರುದ್ಧ ಎರಡನೇ ವಾರಂಟ್ ಜಾರಿಗೊಳಿಸಿದ್ದು, ವಿದೇಶಾಂಗ ಸಚಿವಾಲಯದ ಮೂಲಕ ಇದನ್ನು ಜಾರಿಗೊಳಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದಿನ ವರ್ಷ ಫೆಬ್ರವರಿ 4ಕ್ಕೆ ಮುಂದೂಡಿದ್ದಾರೆ.
ಕೋರ್ಟ್ ಇಂದು ಬೆಳಗ್ಗೆಯಷ್ಟೇ ಮದ್ಯದ ದೊರೆಯ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತ್ತು. ಅಲ್ಲದೆ ಇದೇ ಪ್ರಕರಣ ಸಂಬಂಧ ಈ ಹಿಂದೆ ಆಗಸ್ಟ್ 6ರಂದು ಸಹ ವಾರಂಟ್ ಜಾರಿಗೊಳಿಸಿತ್ತು. ಆದರೆ ಪದೇ ಪದೇ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಮಲ್ಯ ಅವರನ್ನು ಬಂಧಿಸಿ, ಕರೆತರುವಂತೆ ಕೋರ್ಟ್ ಸೂಚಿಸಿದೆ.
ಮಲ್ಯ ಮಾಲೀಕತ್ವದ ಕಿಂಗ್ ಫಿಶರ್ ಏರ್ ಲೈನ್ಸ್ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೀಡಿದ್ದ ಒಂದು ಕೋಟಿ ರುಪಾಯಿ ಚೆಕ್ ಬೌನ್ಸ್ ಆಗಿದ್ದು, ಈ ಸಂಬಂಧ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಲ್ಯ ವಿರುದ್ಧ ಕೇಸ್ ದಾಖಲಿಸಿದೆ.