ಜನರಿಂದ ತುಂಬಿಹೋಗಿದ್ದ ಖಾಸಗಿ ಬಸ್ ಒಂದು ಹಿಮಾಚಲ ಪ್ರದೇಶದ ಮಂಡಿ ಪಟ್ಟಣದ ಬಳಿ ಬಿಯಾಸ್ ನದಿಗೆ ಬಿದ್ದ ದುರ್ಘಟನೆಯಲ್ಲಿ ಕನಿಷ್ಠ 10 ಜನ ಮೃತಪಟ್ಟು, 30 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ
ಶಿಮ್ಲಾ: ಜನರಿಂದ ತುಂಬಿಹೋಗಿದ್ದ ಖಾಸಗಿ ಬಸ್ ಒಂದು ಹಿಮಾಚಲ ಪ್ರದೇಶದ ಮಂಡಿ ಪಟ್ಟಣದ ಬಳಿ ಬಿಯಾಸ್ ನದಿಗೆ ಬಿದ್ದ ದುರ್ಘಟನೆಯಲ್ಲಿ ಕನಿಷ್ಠ 10 ಜನ ಮೃತಪಟ್ಟು, 30 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಂಡಿ ಪಟ್ಟಣದಿಂದ ಕುಲುಗೆ ತೆರೆಳುತ್ತಿದ್ದ ಬಸ್ ನಲ್ಲಿ 45 ಜನಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ರಾಜಧಾನಿಯಿಂದ 200 ಕಿಮೀ ದೂರದಲ್ಲಿರುವ ಬೃಂದವಾಣಿ ಬಳಿ ಬಸ್ ನದಿಗೆ ಬಿದ್ದಿದೆ.
ಈ ದುರ್ಘಟನೆಯಲ್ಲಿ 10 ಜನ ಮೃತಪಟ್ಟಿದ್ದಾರೆ ಎಂದು ಉಪ ಕಮಿಷನರ್ ಸಂದೀಪ್ ಕದಮ್ ಹೇಳಿದ್ದಾರೆ.
"ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ" ಎಂದು ಅವರು ಹೇಳಿದ್ದು, ಗಾಯಗೊಂಡವರನ್ನು ಮಂಡಿಯ ಜೋನಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಮೃತಪಟ್ಟವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ನದಿಯಿಂದ ಬಸ್ ಹೊರತೆಗೆಯಲು ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ದ್ವಿಚಕ್ರ ವಾಹನದೊಂದಿಗೆ ಅಪಘಾತ ತಪ್ಪಿಸಲು ಹೋಗಿ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.