ನಗದು ಬಿಕ್ಕಟ್ಟು; ಮತ್ತೆ ಮೋದಿ ಮೇಲೆ ಕೇಜ್ರಿವಾಲ್ ವಾಗ್ದಾಳಿ
ನಗದು ಬಿಕ್ಕಟ್ಟಿನಿಂದ ಸಾಮಾನ್ಯ ಜನಕ್ಕೆ ಇನ್ನಿಲ್ಲದ ಸಂಕಟ ತಂದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ನಗದು ಬಿಕ್ಕಟ್ಟಿನಿಂದ ಸಾಮಾನ್ಯ ಜನಕ್ಕೆ ಇನ್ನಿಲ್ಲದ ಸಂಕಟ ತಂದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಬಡಜನ ಈಗ ನೆಮ್ಮದಿಯಿಂದ ನಿದ್ದೆ ಮಾಡುತ್ತಾರೆ ಮತ್ತು ಶ್ರೀಮಂತರು ನಿದ್ದೆ ಮಾತ್ರೆ ತೆಗೆದುಕೊಳ್ಳುತ್ತಾರೆ ಎಂದಿರುವ ಮೋದಿ ಹೇಳಿಕೆಯನ್ನು ಖಂಡಿಸಿರುವ ಅವರು ಸದ್ಯದ ಪರಿಸ್ಥಿತಿತಿ ಇದಕ್ಕೆ ತದ್ವಿರುದ್ಧವಾಗಿದೆ ಎಂದಿದ್ದಾರೆ.
"ಬ್ಯಾಂಕ್ ಗಳ ಹೊರಗೆ ಸಾಲುಗಟ್ಟಿ ನಿಂತಿರುವವರು ಬಡಜನರು ಮತ್ತು ಮೋದಿ ಗೆಳೆಯರು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾರೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.
ನವೆಂಬರ್ ೮ ರಂದು ಕೇಂದ್ರ ಸರ್ಕಾರ ಘೋಷಿಸದ ೫೦೦ ಮತ್ತು ೧೦೦ ರೂ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಯಾವುದೇ ಪೂರ್ವಯೋಜನೆಯಿಲ್ಲದೆ ಮಾಡಿದ ನಿರ್ಧಾರ. ಈ ನಿರ್ಧಾರವನ್ನು ಹಿಂಪಡೆಯುವುದರ ಬದಲು ಮೊಂಡುತನ ತೋರುತ್ತಿದ್ದಾರೆ ಎಂದು ಕೂಡ ಅವರು ದೂರಿದ್ದಾರೆ.
"೧೦೦೦ ರೂ ನೋಟುಗಳ ಬದಲು ೨೦೦೦ ರೂ ನೋಟುಗಳನ್ನು ಪರಿಚಯಿಸುವುದರಿಂದ ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ತಡೆಯಲು ಹೇಗೆ ಸಾಧ್ಯ ಎಂದು ನಮಗೆ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ" ಎಂದು ಕೂಡ ಅವರು ಹೇಳಿದ್ದಾರೆ.