ಚಳಿಗಾಲ ಅಧಿವೇಶನ: ಕಪ್ಪು ಹಣ ವಿರುದ್ಧ ಕ್ರಮಕ್ಕೆ ಸಹಕರಿಸಲು ಎಲ್ಲ ಪಕ್ಷಗಳಿಗೆ ಮೋದಿ ಕೋರಿಕೆ
ಮುಂಬರಲಿರುವ ಚಳಿಗಾಲದ ಅಧಿವೇಶನದ ಕಾರ್ಯಸೂಚಿ ಪಟ್ಟಿಗಾಗಿ ಕರೆದಿದ್ದ ಸರ್ವ ಪಕ್ಷ ಸಭೆಯಲ್ಲಿ ರಾಷ್ಟ್ರದ ಹಿತಾಸಕ್ತಿಯಿಂದ ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮಗಳಿಗೆ ಸಹಕರಿಸಬೇಕೆಂದು ಎಲ್ಲ
ನವದೆಹಲಿ: ಮುಂಬರಲಿರುವ ಚಳಿಗಾಲದ ಅಧಿವೇಶನದ ಕಾರ್ಯಸೂಚಿ ಪಟ್ಟಿಗಾಗಿ ಕರೆದಿದ್ದ ಸರ್ವ ಪಕ್ಷ ಸಭೆಯಲ್ಲಿ ರಾಷ್ಟ್ರದ ಹಿತಾಸಕ್ತಿಯಿಂದ ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮಗಳಿಗೆ ಸಹಕರಿಸಬೇಕೆಂದು ಎಲ್ಲ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮನವಿ ಮಾಡಿದ್ದಾರೆ.
ಸರ್ವಪಕ್ಷ ಸಭೆಯ ನಂತರ ಮಾತನಾಡಿದ ಕೇಂದ್ರ ಸಂಸತ್ತು ವ್ಯವಹಾರಗಳ ಸಚಿವ ಅನಂತ್ ಕುಮಾರ್ "ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಚಳಿಗಾಲದ ಅಧಿವೇಶನದಲ್ಲಿ ಎಲ್ಲ ಪಕ್ಷಗಳು ಸಹಕರಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮಗಳಿಗೆ ಸಹಕರಿಸಬೇಕೆಂದು ಕೂಡ ಅವರು ಹೇಳಿದ್ದಾರೆ" ಎಂದು ತಿಳಿಸಿದ್ದಾರೆ.
"ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಒಟ್ಟಿಗೆ ನಡೆಸುವ ಸಾಧ್ಯತೆಯನ್ನು ಕೂಡ ಚರ್ಚಿಸಬೇಕೆಂದು ಪ್ರಧಾನಿ ಕರೆ ಕೊಟ್ಟಿದ್ದಾರೆ" ಎಂದು ಅನಂತ್ ಕುಮಾರ್ ಹೇಳಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಮುಖಂಡ ಗುಲಾಬ್ ನಬಿ ಆಜಾದ್ ಅವರು ಸರ್ವ ಪಕ್ಷ ಸಭೆಯ ನಂತರ "ಎಲ್ಲ ವಿಪಕ್ಷಗಳು ಒಟ್ಟಾಗಿದ್ದು, ಏನಾದರೂ ಆಗಲಿ ನಾವು ಎಲ್ಲ ವಿಷಯಗಳನ್ನು ಸಂಸತ್ತಿನಲ್ಲಿ ಎತ್ತುತ್ತೇವೆ" ಎಂದಿದ್ದಾರೆ.