

ನವದೆಹಲಿ: ನೋಟು ನಿಷೇಧ ವಿರುದ್ಧ ವಿಪಕ್ಷಗಳು ಕರೆ ನೀಡಿರುವ ಆಕ್ರೋಶ್ ದಿವಸ್ ಹಾಗೂ ಭಾರತ್ ಬಂದ್ ಗೆ ದೇಶದ ಹಲವೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನ ಜೀವನ ಸಾಮಾನ್ಯದಂತಿದೆ.
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ದೆಹಲಿಯಲ್ಲಿ ಟಿಎಂಸಿ, ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷಗಳು ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿವೆ. ಆದರೆ ಈ ರಾಜ್ಯಗಳಲ್ಲೂ ಭಾರತ್ ಬಂದ್ ಗೆ ಜನರ ಪ್ರತಿಕ್ರಿಯೆ ಅಷ್ಟಾಗಿ ಲಭಿಸಿಲ್ಲ. ಜನ ಜೀವನ ಸಾಮಾನ್ಯವಾಗಿದ್ದು, ವಾಣಿಜ್ಯ ವಹಿವಾಟು ಎಂದಿನಂತೆ ಸಾಗಿದೆ. ಇನ್ನು ಕೋಲ್ಕತಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಧ್ಯಾಹ್ಮ 1 ಗಂಟೆಗೆ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದು, ಈ ರ್ಯಾಲಿಗೆ ಟಿಎಂಸಿ ಕಾರ್ಯಕರ್ತರೂ ಸೇರಿದಂತೆ ಸುಮಾರು 1 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಇನ್ನು ಸ್ವತಃ ಮಮತಾ ಬ್ಯಾನರ್ಜಿ ಅವರು ಬಂದ್ ವಿರೋಧ ವ್ಯಕ್ತಪಡಿಸಿದ್ದು, ಕೇವಲ ಪ್ರತಿಭಟನಾ ರ್ಯಾಲಿ ಮಾತ್ರ ಹಮ್ಮಿಕೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ.
ಅಂತೆಯೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೂಡ ದೆಹಲಿಯ ಸೆಂಟ್ರಲ್ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಇನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಕೂಡ ನೋಟು ನಿಷೇಧಜ ವಿರುದ್ಧ ವಿಪಕ್ಷಗಳ ಪ್ರತಿಭಟನೆಯಿಂದ ದೂರ ಸರಿದಿದ್ದು, ನೋಟು ನಿಷೇಧವನ್ನು ತಾವು ಬೆಂಬಲಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಬಿಹಾರದಲ್ಲೂ ಭಾರತ್ ಬಂದ್ ಗೆ ನಿರೀಕ್ಷಿತ ಬೆಂಬಲ ದೊರೆತಿಲ್ಲ. ಆದರೆ ಬಿಹಾರದಲ್ಲಿ ಪ್ರತಿಪಕ್ಷಗಳು ರೈಲು ತಡೆ ನಡೆಸಲು ಮುಂದಾಗಿದ್ದು, ಪೊಲೀಸರು ಅವರನ್ನು ತಡೆಯಲೆತ್ನಿಸಿದ್ದಾರೆ.