ಭಾರತ-ರಷ್ಯಾ ನಡುವೆ 5 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಡಂಬಡಿಕೆ

ಗೋವಾದಲ್ಲಿ ಆರಂಭವಾಗಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದೊಂದಿಗೆ 5 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಹಾಗೂ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ರಷ್ಯಾ ಅಧ್ಯಕ್ಷ ಪುಟಿನ್ ಹಾಗೂ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

ಪಣಜಿ: ಗೋವಾದಲ್ಲಿ ಆರಂಭವಾಗಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದೊಂದಿಗೆ 5 ಬಿಲಿಯನ್  ಡಾಲರ್ ಮೊತ್ತದ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.

ಇಂದು ಭಾರತಕ್ಕೆ ಆಗಮಿಸಲಿರುವ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದು, ಈ ವೇಳೆ ಉಭಯ ನಾಯಕರು ಈ ಮಹತ್ವದ ರಕ್ಷಣಾ ಒಪ್ಪಂದಗಳಿಗೆ  ಸಹಿಹಾಕಲಿದ್ದಾರೆ. ಮೂಲಗಳ ಪ್ರಕಾರ ಭಾರಿ ಪ್ರಮಾಣದ ಈ ಬೃಹತ್ ಒಪ್ಪಂದದಲ್ಲಿ ಪ್ರಮುಖವಾಗಿ ರಷ್ಯಾದ ಅತ್ಯಾಧುನಿಕ ಹೆಲಿಕಾಪ್ಟರ್ ಗಳನ್ನು ಭಾರತದಲ್ಲಿ ನಿರ್ಮಿಸುವ ಒಪ್ಪಂದ ಹಾಗೂ  ಭಾರತೀಯ ಸೇನೆ ಆಧುನೀಕರಣಕ್ಕೆ ನೆರವಾಗಬಲ್ಲ ರಷ್ಯಾದ ಕೆಲ ಪ್ರಮುಖ ಕ್ಷಿಪಣಿಗಳನ್ನು ಪೂರೈಕೆ ಮಾಡುವ ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರು ಸಹಿಹಾಕಲಿದ್ದಾರೆ.

ಭಾರತದಲ್ಲಿ ತಯಾರಾಗಲಿದೆ ರಷ್ಯಾದ ವಿಧ್ವಂಸಕ ಯುದ್ಧ ಹೆಲಿಕಾಪ್ಟರ್
ಇನ್ನು ಭಾರತ ಮತ್ತು ರಷ್ಯಾ ದೇಶಗಳ ನಡುವೆ ಏರ್ಪಡುತ್ತಿರುವ ನೂತನ ಒಪ್ಪಂದಗಳಿಂದಾಗಿ ರಷ್ಯಾ ಸೇನೆಯ ಪ್ರಬಲ ಯುದ್ಧ ಹೆಲಿಕಾಪ್ಟರ್ ಎಂದು ಹೇಳಲಾಗುತ್ತಿರುವ ಕಮಾವ್ 226ಟಿ  ಹೆಲಿಕಾಪ್ಟರ್ ಭಾರತದಲ್ಲೇ ತಯಾರಾಗಲಿದೆ. ಮೂಲಗಳ ಪ್ರಕಾರ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಸುಮಾರು 200 ಹೆಲಿಕಾಪ್ಟರ್ ಗಳನ್ನು ಭಾರತದಲ್ಲಿ ತಯಾರಿಸುವ ಒಪ್ಪಂದಕ್ಕೆ  ರಷ್ಯಾ ಸಹಿ ಹಾಕಲಿದೆ. ಇದಲ್ಲದೆ ಅತ್ಯಾಧುನಿಕ ಎಸ್-400 ಟ್ರಂಪ್ ಕ್ಷಿಪಣಿ ಒಪ್ಪಂದಕ್ಕೂ ರಷ್ಯಾ ಭಾರತದೊಂದಿಗೆ ಸಹಿಹಾಕಲಿದೆ. ಸುಮಾರು 39 ಸಾವಿರ ಕೋಟಿ ರು. ವೆಚ್ಚದಲ್ಲಿ 5 ಎಸ್-400  ಟ್ರಂಪ್ ಕ್ಷಿಪಣಿಗಳನ್ನು ಭಾರತ ರಷ್ಯಾದಿಂದ ಖರೀದಿಸಲಿದೆ.

ಈ ಅತ್ಯಾಧುನಿಕ ಕ್ಷಿಪಣಿ ಮೂಲಕ ಭಾರತದ ಗಡಿ ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲಿಷ್ಟವಾಗಲಿದ್ದು, ಭಾರತದತ್ತ ನುಗ್ಗಿ ಬರುವ ಶತ್ರುರಾಷ್ಟ್ರದ ಯಾವುದೇ ಮಿಸೈಲ್, ಯುದ್ಧ ವಿಮಾನ, ಡ್ರೋನ್  ಗಳನ್ನು ಆಕಾಶದಲ್ಲೇ ಹೊಡೆದುರುಳಿಸುವ ಸಾಮರ್ಥ್ಯ ಈ ವಿಶೇಷ ಕ್ಷಿಪಣಿಗಿದೆ. ಸುಮಾರು 400 ಕಿ.ಮೀ ವ್ಯಾಪ್ತಿಯಲ್ಲಿ ಈ ಕ್ಷಿಪಣಿ ಕಾರ್ಯಾಚರಿಸಲಿದೆ.

ಇದೇ ಅಕ್ಟೋಬರ್ 14-16ರವರೆಗೆ ಗೋವಾದಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು, ಈ ವೇಳೆ ರಷ್ಯಾದ ಸುಮಾರು 700ಕ್ಕೂ ಅಧಿಕ ಸಂಸ್ಥೆಗಳು ಭಾರತದಲ್ಲಿ ಬಂಡವಾಳ ಹೂಡುವ ಸಾಧ್ಯತೆಗಳಿವೆ  ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com