ಪಾಕಿಸ್ತಾನದ ಎಲ್ಲ ಪ್ರದೇಶಗಳನ್ನೂ ತಲುಪುವ ಬ್ರಹ್ಮೋಸ್ ಕ್ಷಿಪಣಿ ಅಭಿವೃದ್ದಿ!

ಗಡಿಯಲ್ಲಿ ತಂಟೆ ಮಾಡುತ್ತಿರುವ ಪಾಕಿಸ್ತಾನ ದೇಶದ ಮೂಲೆ ಮೂಲೆಯನ್ನೂ ತಲುಪ ಬಲ್ಲ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸಲು ಭಾರತ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಬ್ರಹ್ಮೋಸ್ ಕ್ಷಿಪಣಿ (ಸಂಗ್ರಹ ಚಿತ್ರ)
ಬ್ರಹ್ಮೋಸ್ ಕ್ಷಿಪಣಿ (ಸಂಗ್ರಹ ಚಿತ್ರ)

ನವದೆಹಲಿ: ಗಡಿಯಲ್ಲಿ ತಂಟೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತ ಕಠಿಣ ಎಚ್ಚರಿಕೆ ನೀಡಲು ಮುಂದಾಗಿದ್ದು, ಪಾಕಿಸ್ತಾನ ದೇಶದ ಮೂಲೆ ಮೂಲೆಯನ್ನೂ ತಲುಪ ಬಲ್ಲ ಬ್ರಹ್ಮೋಸ್  ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸಲು ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಭಾರತ ಮತ್ತು ರಷ್ಯಾ ದೇಶಗಳ ನಡುವಿನ ಸ್ನೇಹ ಸಂಬಂಧದ ಪ್ರತೀಕವಾಗಿರುವ ಬ್ರಹ್ಮೋಸ್ ಕ್ಷಿಪಣಿ ಅಭಿವೃದ್ಧಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಉಭಯ ದೇಶಗಳು ನಿರ್ಧರಿಸಿದ್ದು, 600  ಕಿ.ಮೀ ಅಥವಾ ಅದಕ್ಕಿಂತಲೂ ಹೆಚ್ಚು ದೂರ ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತು ಕ್ರಮಿಸಬಲ್ಲ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿ ತಯಾರು ಮಾಡಲು ರಷ್ಯಾ ಭಾರತಕ್ಕೆ ಸಹಕಾರ ನೀಡಲಿದೆ.  ಪ್ರಸ್ತುತ ರಷ್ಯಾ ಮತ್ತು ಭಾರತ ತಯಾರಿಸುತ್ತಿರುವ ಈ ಬ್ರಹ್ಮೋಸ್ ಕ್ಷಿಪಣಿಗಳು ಪಾಕಿಸ್ತಾನದ ಯಾವುದೇ ಮೂಲೆಯನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಗೋವಾದಲ್ಲಿ ನಡೆದ ಬ್ರಿಕ್ಸ್ ಸಮಾವೇಶದಲ್ಲಿ ಉಭಯ ದೇಶಗಳ ರಕ್ಷಣಾ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯವನ್ನು ಹೆಚ್ಚಿಸುವ ನಿರ್ಧಾರ  ಕೈಗೊಳ್ಳಲಾಗಿದ್ದು, ಈ ಸಂಬಂಧ ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ರಷ್ಯಾ ಸಹಿ ಹಾಕಿವೆ ಎಂದು ತಿಳಿದು ಬಂದಿದೆ. ಕಳೆದ ಜೂನ್ ನಲ್ಲಿ ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್  (ಎಂಟಿಸಿಆರ್)ಗೆ ಭಾರತ ಸೇರ್ಪಡೆಯಾಗಿರುವುದರಿಂದ ವಿವಿಧ ದೇಶಗಳ ಅತ್ಯಾಧುನಿಕ ಕ್ಷಿಪಣಿ ತಂತ್ರಜ್ಞಾನ ಹಂಚಿಕೊಳ್ಳಲು ಭಾರತ ಅರ್ಹತೆ ಪಡೆದಿದೆ. ಹೀಗಾಗಿ ಭಾರತ 300 ಕಿ.ಮೀ ಅಧಿಕ  ದೂರದ ಸಾಮರ್ಥ್ಯದ ಕ್ಷಿಪಣಿ ತಂತ್ರಜ್ಞಾನವನ್ನು ಹಂಚಿಕೊಳ್ಳ ಬಹುದಾಗಿದೆ.

ಅದರಂತೆ ರಷ್ಯಾ ಭಾರತದ ಆಧುನಿಕ ತಂತ್ರಜ್ಞಾನದ ಕ್ಷಿಪಣಿ ಅಭಿವೃದ್ಧಿಗೆ ಭಾರತಕ್ಕೆ ನೆರವು ನೀಡಲಿದ್ದು, 600 ಕಿ.ಮೀ ಅಥವಾ ಅದಕ್ಕಿಂತಲೂ ಹೆಚ್ಚು ಸಾಮರ್ಥ್ಯದ ಕ್ಷಿಪಣಿ ಅಭಿವೃದ್ದಿಯಲ್ಲಿ ರಷ್ಯಾ  ಭಾರತಕ್ಕೆ ಸಹಕಾರ ನೀಡಲಿದೆ. ಬ್ರಹ್ಮೋಸ್ ಕ್ಷಿಪಣಿ ಪ್ರಸ್ತುತ 300 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಭಾರತದ ಬಳಿ ಇದಕ್ಕಿಂತಲೂ ಹೆಚ್ಚಿನ ವ್ಯಾಪ್ತಿಯ ಖಂಡಾಂತರ ಕ್ಷಿಪಣಿಗಳಿವೆಯಾದರೂ  ಬ್ರಹ್ಮೋಸ್ ಕ್ಷಿಪಣಿ ಗುರಿಯನ್ನು ನಿಖರವಾಗಿ ತಲುಪುವ ಮತ್ತು ಅದನ್ನು ಕ್ಷಣ ಮಾತ್ರದಲ್ಲಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com