

ನವದೆಹಲಿ: ಬಿಜೆಪಿ ಸಂಸದ ವರುಣ್ ಗಾಂಧಿ ಅವರನ್ನು ವಿದೇಶಿ ಶಸ್ತ್ರಾಸ್ತ್ರ ದಲ್ಲಾಳಿಗಳು ಹನಿಟ್ರ್ಯಾಪ್ ಮಾಡುವ ಮೂಲಕ ದೇಶದ ಅಮೂಲ್ಯ ಮತ್ತು ತೀರಾ ಗೌಪ್ಯವಾದ ರಕ್ಷಣಾ ಮಾಹಿತಿಗಳನ್ನು ಕಳವು ಮಾಡಿಸಿದ್ದಾರೆ ಎಂಬ ಗಂಭೀರ ಆರೋಪವೊಂದು ಕೇಳಿಬರುತ್ತಿದೆ.
ಖಾಸಗಿ ಪತ್ರಿಕೆಯೊಂದು ವರದಿ ಮಾಡಿರುವಂತೆ ಸುಲ್ತಾನ್ ಪುರ ಕ್ಷೇತ್ರದ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಹನಿಟ್ರ್ಯಾಪ್ ಗೆ ಒಳಗಾಗಿದ್ದು, ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ದಲ್ಲಾಳಿಯೊಬ್ಬರಿಗೆ ದೇಶದ ತೀರಾ ಗೌಪ್ಯವಾದ ಮತ್ತು ಅಮೂಲ್ಯ ರಕ್ಷಣಾ ಮಾಹಿತಿಗಳನ್ನು ಕಳವು ಮಾಡಿ ರವಾನಿಸಿದ್ದಾರೆ ಎಂದು ಹೇಳಲಾಗತ್ತಿದೆ. ಹುಡುಗಿಯರನ್ನು ಮುಂದೆ ಬಿಟ್ಟು ಅವರ ಮೂಲಕ ವರುಣ್ ಗಾಂಧಿ ಅವರನ್ನು ಬಲೆಗೆ ಹಾಕಿಕೊಂಡು ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ದಲ್ಲಾಳಿ ಅಭಿಷೇಕ್ ವರ್ಮಾ ಎಂಬಾತ ರಕ್ಷಣಾ ಮಾಹಿತಿಯನ್ನು ಕಳವು ಮಾಡಿಸಿದ್ದಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಅಮೆರಿಕದ ಖ್ಯಾತ ಮಾಹಿತಿ ಹಕ್ಕು ಹೋರಾಟಗಾರ ಸಿ.ಎಡ್ಮಂಡ್ಸ್ ಅಲೆನ್ ಅವರು ಪ್ರಧಾನಮಂತ್ರಿ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದು, ರಾಷ್ಟ್ರೀಯ ಭದ್ರತಾ ಮಾಹಿತಿ ನೀಡಿರುವ ಸಾಧ್ಯತೆ ಇರುವುದಾಗಿ ಪತ್ರದಲ್ಲಿ ಆರೋಪಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಿದೇಶಿ ಯುವತಿಯರನ್ನು ಬಿಟ್ಟು ವರುಣ್ ಗಾಂಧಿ ಅವರನ್ನು ದಲ್ಲಾಳಿ ಅಭಿಷೇಕ್ ಬ್ಲ್ಕಾಕ್ ಮೇಲ್ ಮಾಡಿರುವ ಸಾಧ್ಯತೆಗಳಿದ್ದು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನು ಕಳವು ಮಾಡಿ ವಿದೇಶಗಳಿಗೆ ನೀಡಿದ್ದಾರೆ ಎಂದು ಎಡ್ಮಂಡ್ಸ್ ತಮ್ಮ ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ರಕ್ಷಣಾ ಇಲಾಖೆಯ ಸ್ಥಾಯಿ ಸಮಿತಿ ಸದಸ್ಯರು ಕೂಡ ಆಗಿರುವ ವರುಣ್ ಗಾಂಧಿ ಅವರನ್ನು ಅಭಿಷೇಕ್ ವರ್ಮಾ ಹನಿಟ್ರ್ಯಾಪ್ ಬಲೆಗೆ ಬೀಳಿಸಿರುವುದಾಗಿ ಎಡ್ಮಂಡ್ಸ್ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕಳೆದ ಸೆಪ್ಟೆಂಬರ್ 16ರಂದೇ ಈ ಕುರಿತು ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆಯಲಾಗಿದ್ದು, ಪತ್ರದಲ್ಲಿನ ಆರೋಪಕ್ಕೆ ಪೂರಕವಾಗಿ ಎಡ್ಮಂಡ್ಸ್ ಮಾಹಿತಿಗಳಿರುವ ಸಿಡಿ ಹಾಗೂ ಕೆಲ ಫೋಟೋಗಳನ್ನೂ ಕೂಡ ಪಿಎಂಒಗೆ ರವಾನಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವರುಣ್ ಗಾಂಧಿ ಹನಿಟ್ರ್ಯಾಪ್ ಗೆ ಒಳಗಾದ ಪತ್ರದ ಪ್ರತಿಯನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರಿಗೂ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.
ಈ ಹಿಂದೆಯೂ ಕೂಡ ಎಡ್ಮಂಡ್ಸ್ ಅವರು ಹಲವಾರು ವಿವಾದಿತ ಶಸ್ತ್ರಾಸ್ತ್ರ ಒಪ್ಪಂದಗಳನ್ನು ಬಯಲಿಗೆಳೆದಿದ್ದರು. ಮತ್ತು ಈ ಅಲೆನ್ ಎಡ್ಮಂಡ್ಸ್ ಶಸ್ತ್ರಾಸ್ತ್ರ ದಲ್ಲಾಳಿ ಅಭಿಷೇಕ್ ವರ್ಮಾ ಅವರ ಏಜೆಂಟ್ ಎಂದೂ ಕೂಡ ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.