ಎಲ್ಲರ ಸಹಮತವಿಲ್ಲದೆ ಏಕರೂಪ ನಾಗರಿಕ ಸಂಹಿತೆ ಜಾರಿಯಿಲ್ಲ: ವೆಂಕಯ್ಯ ನಾಯ್ಡು

ಎಲ್ಲರ ಸಹಮತವಿಲ್ಲದೆ ಹಿಂಬದಿ ಬಾಗಿಲಿನಿಂದ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಂ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಂ ವೆಂಕಯ್ಯ ನಾಯ್ಡು
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಂ ವೆಂಕಯ್ಯ ನಾಯ್ಡು
Updated on: 
ನವದೆಹಲಿ: ಎಲ್ಲರ ಸಹಮತವಿಲ್ಲದೆ ಹಿಂಬದಿ ಬಾಗಿಲಿನಿಂದ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಂ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಚುನಾವಣೆಗಳಲ್ಲಿ ಅದರಲ್ಲೂ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತಗಳ ಧ್ರುವೀಕರಣಕ್ಕಾಗಿ ಬಿಜೆಪಿ ಈ ವಿಷಯ ಎತ್ತಿದೆ ಎಂಬ ಆರೋಪವನ್ನು ಅವರು ನಿರಾಕರಿಸಿದ್ದಾರೆ. 
ಮುಂದಿನ ಚುನಾವಣೆಗಳಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಪಕ್ಷ ತ್ರಿವಳಿ ತಲಾಕ್, ಏಕರೂಪ ನಾಗರಿಕ ಸಂಹಿತೆ ಮತ್ತು ರಾಮ ದೇವಾಲಯದ ವಿಷಯಗಳನ್ನು ಎತ್ತುವಿದಿಲ್ಲ, ಬದಲಾಗಿ ಅಭಿವೃದ್ಧಿಯ ಅಜೆಂಡಾ ಇಟ್ಟುಕೊಂಡು ಸ್ಪರ್ಧಿಸಲಿದ್ದೇವೆ ಎಂದು ಸಚಿವ ಹೇಳಿದ್ದಾರೆ. 
ಇಂತಹ ಪ್ರಮುಖ ವಿಷಯಗಳನ್ನು ರಾಜಕೀಯ ಮತ್ತು ಚುನಾವಣಾ ಲಾಭಗಳ ದೃಷ್ಟಿಯಲ್ಲಿ ನೋಡಬಾರದು ಎಂದಿರುವ ಸರ್ಕಾರದ ಮುಖ್ಯ ವಕ್ತಾರ, ಸೇನೆಯ ನಿರ್ಧಿಷ್ಟ ದಾಳಿಯನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪವನ್ನು ಕೂಡ ತಿರಸ್ಕರಿಸಿದ್ದಾರೆ. 
"ತ್ರಿವಳಿ ತಲಾಕ್ ಧಾರ್ಮಿಕ ವಿಷಯ ಎಂದು ಸರ್ಕಾರ ಪರಿಗಣಿಸಿಲ್ಲ ಬದಲಾಗಿ ಇದು ಲಿಂಗ ತಾರತಮ್ಯದ ಸಮಸ್ಯೆ. ಮುಸ್ಲಿಮರ ಧಾರ್ಮಿಕ ವಿಷಯದಲ್ಲಿ ನಾವು ಹಸ್ತಕ್ಷೇಪ ನಡೆಸುತ್ತಿದ್ದೇವೆ ಎಂದು ಹೇಳುವುದು ತಪ್ಪು. 
"ಇದೆ ಭಾರತೀಯ ಸಂಸತ್ತು ಮತ್ತು ಇದೆ ರಾಜಕೀಯ ವ್ಯವಸ್ಥೆ ಹಿಂದೂ ಕಾನೂನು ಕಾಯ್ದೆ, ವಿಚ್ಚೇಧನ ಕಾಯ್ದೆ ಜಾರಿ ಮಾಡಿ, ಹಿಂದೂ ಮದುವೆ ನೀತಿ, ವರದಕ್ಷಿಣೆ ಮತ್ತು ಸತಿ ಪದ್ಧತಿಯನ್ನು ನಿಷೇಧಿಸಿತ್ತು. ಇವೆಲ್ಲವನ್ನೂ ಭಾರತೀಯ ಸಂಸತ್ತೇ ಜಾರಿಗೆ ತಂದಿದ್ದು" ಎಂದು ನಾಯ್ಡು ಹೇಳಿದ್ದಾರೆ. 
ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ವಿಶಾಲವಾದ ಒಮ್ಮತ ಮೂಡಬೇಕು ಎಂದಿರುವ ಅವರು ತ್ರಿವಳಿ ತಲಾಕ್ ವಿಷಯ ಎತ್ತಿ ಏಕರೂಪ ನಾಗರಿಕ ಸಂಹಿತೆಯನ್ನು ಹಿಂಬದಿ ಬಾಗಿಲಿನಿಂದ ಜಾರಿಗೆ ತರಲಾಗುವುದು ಎಂಬ ಆರೋಪವನ್ನು ನಿರಾಕರಿಸಿದ್ದಾರೆ. 
"ನಾವು ಈಗ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದರ ಬಗ್ಗೆ ಮಾತನಾಡುತ್ತಿಲ್ಲ. ಇದಕ್ಕಾಗಿ ಕಾನೂನು ಸಮಿತಿ ಕೆಲವು ಪ್ರಶ್ನೆಗಳನ್ನು ಎತ್ತಿ ಜನಕ್ಕೆ ಪ್ರತಿಕ್ರಿಯಿಸುವಂತೆ ಕೋರಿದೆ. 
"ವಿಶಾಲವಾದ ಒಮ್ಮತ ಮೂಡದ ಹೊರತು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ" ಎಂದಿರುವ ಅವರು ತ್ರಿವಳಿ ತಲಾಕ್ ಬಗ್ಗೆ ಸುಪ್ರೀಂ ಕೋರ್ಟ್ ಸರಿಯಾದ ನಿರ್ಣಯ ಕೈಗೊಳ್ಳುವುದರ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com