

ವಿಶ್ವಸಂಸ್ಥೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಕೊನೆಗಾಣಿಸಿ ಉಭಯ ದೇಶಗಳ ಗಡಿಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ತಾನು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮೂನ್ ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಭಾರತ ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿ ಕುರಿತಂತೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಗಡಿಯಲ್ಲಿನ ಇತ್ತೀಚಿನ ಬೆಳವಣಿಗೆಗಳು ಸಮಾಧಾನಕರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಪಿಒಕೆಯಲ್ಲಿ ಉಗ್ರ ಚಟುವಟಿಕೆ ಹಾಗೂ ಪದೇ ಪದೇ ಉಭಯ ರಾಷ್ಟ್ರಗಳ ಸೈನಿಕರ ನಡುವಿನ ಗುಂಡಿನ ಚಕಮಕಿ ಸೌಹಾರ್ಧತೆಯನ್ನು ಹಾಳುಮಾಡುತ್ತದೆ ಎಂದು ಅಭಿಪ್ರಾಯಪಟ್ಟಿರುವ ಬಾನ್ ಕಿ ಮೂನ್ ಅವರು, ಉಭಯ ರಾಷ್ಟ್ರಗಳು ಬಯಸಿದರೆ ಶಾಂತಿ ಸ್ಥಾಪನೆಗಾಗಿ ಮಧ್ಯಸ್ಥಿಕೆ ವಹಿಸಲು ತಾವು ಸಿದ್ಧ ಎಂದು ಹೇಳಿದ್ದಾರೆ.
"ಎರಡೂ ಭಾಗದಲ್ಲಿ ಶಾಂತಿ ಸ್ಥಾಪನೆಗಾಗಿ ಸಾಕಷ್ಟು ಕಾರ್ಯಗಳು ನಡೆಯಬೇಕಿದ್ದು, ಕೇವಲ ಮಾತುಕತೆ ಮುಖಾಂತರವೇ ಇದನ್ನು ಬಗಹರಿಸಿಕೊಳ್ಳಬೇಕು. ಪಾಕಿಸ್ತಾನ ಮತ್ತು ಭಾರತ ಸರ್ಕಾರಗಳೆರಡೂ ಒಪ್ಪಿದರೆ ಕಾಶ್ಮೀರ ವಿವಾದ ಸೇರಿದಂತೆ ಉಭಯ ದೇಶಗಳ ನಡುವಿನ ಸಮಸ್ಯೆಗಳ ಕುರಿತು ಶಾಂತಿಯುತವಾಗಿ ಚರ್ಚಿಸಲು ವೇದಿಕೆ ಒದಗಿಸಿಕೊಡಲು ವಿಶ್ವಸಂಸ್ಥೆ ಸಿದ್ಧವಾಗಿದೆ ಎಂದು ಬಾನ್ ಕಿ ಮೂನ್ ಹೇಳಿದ್ದಾರೆ.
ಕಳೆದ ಸೆಪ್ಟೆಂಬರ್ 18ರಂದು ನಡೆದ ಉರಿ ಉಗ್ರ ದಾಳಿ ಬಳಿಕ ಕೆಂಡಾಮಂಡಲವಾಗಿದ್ದ ಭಾರತ ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ 7 ಉಗ್ರ ಕ್ಯಾಂಪ್ ಗಳನ್ನು ನೆಲಸಮಗೊಳಿಸಿ 38 ಉಗ್ರರನ್ನು ಕೊಂದು ಹಾಕಿತ್ತು. ಈ ಘಟನೆ ಬಳಿಕ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ವಾತಾವರಣೆ ನಿರ್ಮಾಣವಾಗಿತ್ತು. ಪಾಕ್ ಸರ್ಕಾರ ಹಾಗೂ ಪಾಕಿಸ್ತಾನ ಸೇನೆ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುವ ಮಾತುಗಳನ್ನಾಡುವ ಮೂಲಕ ನೇರವಾಗಿಯೇ ಭಯೋತ್ಪಾದಕರಿಗೆ ಬೆಂಬಲ ನೀಡಿತ್ತು.