ನವದೆಹಲಿ: ಪಶ್ಚಿಮ ಬಂಗಾಳ ಮುಖಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹತ್ಯೆ ಮಾಡಿದವರಿಗೆ ೧೧ ಲಕ್ಷ ರೂ ಬಹುಮಾನ ಘೋಷಿಸಿದ ಬಿಜೆಪಿ ಯುವ ಮುಖಂಡನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಬುಧವಾರ ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳು ಲೋಕಸಭೆಯಲ್ಲಿ ಆಗ್ರಹಿಸಿವೆ.
ಪ್ರಶ್ನೋತ್ತರ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ತೃಣಮೂಲ ಕಾಂಗ್ರೆಸ್ ಮುಖಂಡ ಸುಗತ ರಾಯ್, ಭಾರತೀಯ ಜನತಾ ಯುವ ಮೋರ್ಚಾದ ಮುಖಂಡ ಯೋಗೇಶ್ ವರ್ಷನಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
"ಮಮತಾ ಬ್ಯಾನರ್ಜಿ ತಲೆ ಕಡಿದು ತಂದವರಿಗೆ ೧೧ ಲಕ್ಷ ನೀಡುವುದಾಗಿ ಬಿಜೆಪಿ ಯುವ ಮುಖಂಡ ಹೇಳಿದ್ದರು. ಇದು ಖಂಡನೀಯ" ಎಂದು ಸುಗತ ಹೇಳಿದ್ದಾರೆ.
"ಜನಪ್ರಿಯ ಮತ್ತು ಮಣ್ಣಿನ ಜೊತೆಗೆ ಸಂಪರ್ಕವಿರುವ ಮುಖ್ಯಮಂತ್ರಿಯವರಿಗೆ ಬೆದರಿಕೆ ಹಾಕಿರುವ ಮುಖಂಡನ ವಿರುದ್ಧ ಅಗತ್ಯವಿರುವ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
ಈ ಆಗ್ರಹವನ್ನು ಬೆಂಬಲಿಸಿದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ "ಇಂತಹ ವ್ಯಕ್ತಿಗಳಿಗೆ ಬಲವಾದ ಸಂದೇಶ ಕಳುಹಿಸಬೇಕು" ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಅನಂತ್ ಕುಮಾರ್ ಬಿಜೆಪಿ ಮುಖಂಡನ ಹೇಳಿಕೆಯನ್ನು ಖಂಡಿಸಿದ್ದು "ಆ ಮುಖಂಡ ನೀಡಿರುವ ಹೇಳಿಕೆ ಸಂಪೂರ್ಣ ತಪ್ಪು. ಇದನ್ನು ನಾವು ಖಂಡಿಸುತ್ತೇವೆ. ಮಮತಾ ಬ್ಯಾನರ್ಜಿ ಸಾರ್ವಜನಿಕವಾಗಿ ಆಯ್ಕೆಯಾಗಿರುವ ಮುಖಂಡರು ಮತ್ತು ಅವರನ್ನು ಗೌರವಿಸಬೇಕು" ಎಂದಿದ್ದಾರೆ.
ಹನುಮಾನ್ ಜಯಂತಿ ದಿನದ ರ್ಯಾಲಿಯ ವಿರುದ್ಧ ಪಶ್ಚಿಮ ಬಂಗಾಳದ ಪೊಲೀಸರು ಕ್ರಮ ತೆಗೆದುಕೊಂಡಾಗ ವರ್ಷನಿ ಈ ಹೇಳಿಕೆ ನೀಡಿ ಬಹುಮಾನ ಘೋಷಿಸಿದ್ದರು.