ನವದೆಹಲಿ: ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಯುವಕನನ್ನು ಕೊಲೆಗೈದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ಹೇಳಿದ್ದಾರೆ.
"ಸ್ಯಾನ್ ಫ್ರಾನ್ಸಿಸ್ಕೊದ ನಮ್ಮ ರಾಯಭಾರ ಕಚೇರಿಯಿಂದ ನನಗೆ ವರದಿ ಬಂದಿದೆ. ಈ ವರದಿಯ ಪ್ರಕಾರ ಮಾದಕ ವ್ಯಸನಿಯೊಬ್ಬ ಮಿಲ್ಪಿಟಾಸ್ ನಲ್ಲಿ ಶುಕ್ರವಾರ ಸಂಜೆ ವಂಶಿಯವರನ್ನು ಕೊಲೆಗೈದಿದ್ದಾನೆ" ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
"ಆರೋಪಿಯನ್ನು ಬಂಧಿಸಲಾಗಿದೆ" ಎಂದಿರುವ ಅವರು ರಾಯಭಾರ ಕಚೇರಿ ಸಂತ್ರಸ್ತನ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು ಅವರಿಗೆ ಅಗತ್ಯ ಸಹಾಯದ ಭರವಸೆ ನೀಡಿದೆ ಎಂದಿದ್ದಾರೆ.
ವಾರಂಗಲ್ ನಗರ ಜಿಲ್ಲೆಯ ಸಂತ್ರಸ್ತನ ಕುಟುಂಬಕ್ಕೆ ಬಂದ ವರದಿಯ ಪ್ರಕಾರ ವಿ ವಂಶಿ ರೆಡ್ಡಿಯವರನ್ನು (೨೭) ಅವರ ಅಪಾರ್ಟ್ಮೆಂಟ್ ಬಳಿ ಕೊಂದುಹಾಕಲಾಗಿತ್ತು. ರೆಡ್ಡಿಯ ಗೆಳೆಯರು ಈ ಘಟನೆಯ ಬಗ್ಗೆ ದೂರವಾಣಿಯಲ್ಲಿ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದರು.
೨೦೧೫ ರಲ್ಲಿ ಅಮೆರಿಕಾಗೆ ತೆರಳಿದ್ದ ಯುವಕ ಈಗಷ್ಟೇ ಎಂ ಎಸ್ ಪೂರೈಸಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ್ದರು ಎಂದು ತಿಳಿದುಬಂದಿದೆ.