ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರು ತಾವು ಜೈಲು ಸೇರುವ ಮುನ್ನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರಿಂದ ಉಚ್ಚಾಟನೆಗೊಂಡಿದ್ದ ತಮ್ಮ ಕುಟುಂಬದ ಇಬ್ಬರು ಸದಸ್ಯರನ್ನು ಬುಧವಾರ ಪುನ: ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
ಜಯಲಲಿತಾ ಅವರು ಐದು ವರ್ಷಗಳ ಹಿಂದೆ ಶಶಿಕಲಾ ಸಂಬಂಧಿಗಳಾದ ಮಾಜಿ ರಾಜ್ಯಸಭಾ ಸದಸ್ಯ ದಿನಕರನ್ ಹಾಗೂ ವೆಂಕಟೇಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಆದರೆ ಆ ಇಬ್ಬರನ್ನು ಶಶಕಲಾ ಇಂದು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿದ್ದು, ದಿನಕರನ್ ಅವರನ್ನು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
ದಿನಕರನ್ ಹಾಗೂ ವೆಂಕಟೇಶ್ ಇಬ್ಬರೂ ತಮ್ಮ ತಪ್ಪಿನ ಬಗ್ಗೆ ಕ್ಷಮೆ ಕೋರಿದ್ದಾರೆ ಮತ್ತು ಕ್ಷಮಿಸಿ ಪಕ್ಷ ಸೇರಲು ಅವಕಾಶ ನೀಡುವಂತೆ ಮನವಿ ಮಾಡಿದ್ದು, ಅವರ ಮನವಿಯನ್ನು ಪುರಸ್ಕರಿಸಿ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಶಶಿಕಲಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಕ್ಷ ಮತ್ತು ಸರ್ಕಾರದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಜಯಲಲಿತಾ ಅವರು 2011ರಲ್ಲಿ ದಿನಕರನ್, ವೆಂಕಟೇಶ್ ಹಾಗೂ ಶಶಿಕಲಾ ಪತಿ ಎಂ.ನಟರಾಜನ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು.