ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರು ತಮ್ಮನ್ನು ಚೆನ್ನೈನ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸುವಂತೆ ಜೈಲು ಅಧಿಕಾರಿಗಳಿಗೆ ಸೋಮವಾರ ಮನವಿ ಮಾಡಿದ್ದಾರೆ.
ಫೆ.15ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ಅವರು ಇಂದು ತಮ್ಮ ವಕೀಲರ ಜೊತೆ ಚರ್ಚಿಸಿ ತಮ್ಮನ್ನು ಚೆನ್ನೈನ ಜೈಲಿಗೆ ವರ್ಗಾಯಿಸುವಂತೆ ಕೋರಿ ಜೈಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜೈಲು ಅಧಿಕಾರಿಗಳು ಶಶಿಕಲಾ ಮನವಿ ತಮ್ಮ ಕೈ ಸೇರಿದ್ದು, ಈ ಬಗ್ಗೆ ಚೆನ್ನೈನ ಜೈಲು ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಶಶಿಕಲಾ ಪರಪ್ಪನ ಅಗ್ರಹಾರ ಜೈಲಿನಿಂದ ವರ್ಗಾವಣೆ ಆಗುವ ಬಗ್ಗೆ ಚೆನ್ನೈನ ಕೇಂದ್ರ ಕಾರಾಗೃಹದ ಅಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ವರದಿ ವಿವರಿಸಿದೆ.