ವಾಷಿಂಗ್ಟನ್: ಅಮೆರಿಕಾದ ಇಂಡಿಯಾನಾ ಸ್ಟೇಟ್ ನಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಭಾರತೀಯನೊಬ್ಬ ಮೃತಪಟ್ಟಿದ್ದು ಅವರ ಪತ್ನಿಗೆ ಗಂಭೀರ ಗಾಯಗಳಾಗಿವೆ.
ಭಾನುವಾರ ನಡೆದ ಈ ದುರ್ಘಟನೆಯಲ್ಲಿ ೩೦ ವರ್ಷದ ಅಂಶುಲ್ ಶರ್ಮ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಪತ್ನಿ ೨೮ ವರ್ಷದ ಸಮೀರಾ ಭಾರದ್ವಾಜ್ ಅವರಿಗೆ ಗಂಭೀರ ಗಾಯಗಳಾಗಿವೆ. ಈ ಇಬ್ಬರು ಇಂಡಿಯಾನಾದ ಕೊಲಂಬಸ್ ನಗರದವರಾಗಿದ್ದು, ನಡೆದುಬರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ೩೬ ವರ್ಷದ ಮೈಕೆಲ್ ಡೆಮಾಇಓ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಕ್ರೈಸ್ಲರ್ ಮಿನಿವ್ಯಾನ್ ಓಡಿಸುತ್ತಿದ್ದ ಇವರು ಭಾರತೀಯ ಜೋಡಿಗೆ, ಕೊಲಂಬಸ್ ನ ಫೋರ್ ಸೀಸನ್ಸ್ ರಿಟೈರ್ ಮೆಂಟ್ ಕೇಂದ್ರದ ಬಳಿ ಹಿಂದಿನಿಂದ ಗುದ್ದಿ ಪರಾರಿಯಾಗಿದ್ದಾರೆ ಎಂದು ಮಂಗಳವಾರ ರಿಪಬ್ಲಿಕ್ ದಿನಪತ್ರಿಕೆ ವರದಿ ಮಾಡಿದೆ.
ಸಮೀರಾ ಅವರನ್ನು ಇಂಡಿಯಾಪೊಲೀಸ್ ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಈಗ ಜೈಲಿನಲ್ಲಿರುವ ಆಪಾದಿತನ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಕೊಳ್ಳಲಾಗಿದೆ.
ಈಮಧ್ಯೆ ಶರ್ಮ ಅವರ ಕುಟುಂಬ ದೇಹವನ್ನು ಭಾರತಕ್ಕೆ ತರಲು ಮತ್ತು ಗಾಯಗೊಂಡಿರುವ ಪತ್ನಿಗೆ ಸಹಾಯ ಮಾಡಲು ಪ್ರಯತ್ನ ನಡೆಸಿದೆ.
ಶರ್ಮ ಅವರು ಉದ್ಯೋಗದಲ್ಲಿದ್ದ ಡೀಸೆಲ್ ಎಂಜಿನ್ ತಯಾರಕ ಸಂಸ್ಥೆ ಕೊಲಂಬಸ್ ನ ಕ್ಯುಮಿನ್ಸ್, ಶರ್ಮ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದು, ದೇಹವನ್ನು ಭಾರತಕ್ಕೆ ಹಿಂದಿರುಗಿಸಲು ಎಲ್ಲ ಬೆಂಬಲ ನೀಡುವುದಾಗಿ ತಿಳಿಸಿದೆ.