

ಬ್ಯಾಂಕಾಕ್: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‍ನ ಇರಾವನ್ ದೇಗುಲದ ಸಮೀಪ ಸೋಮವಾರ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಘಟನೆಯಿಂದ ಕನಿಷ್ಠ 78ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಅದೇ ಸ್ಥಳದಲ್ಲಿ ಎರಡು ಬಾಂಬ್ ಪತ್ತೆಯಾಗಿದ್ದು, ಅದನ್ನು ನಿಷ್ಕ್ರಿಯಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬ್ಯಾಂಕಾಕ್‍ನ ಚಿಡ್ಲಾಮ್ ಜಿಲ್ಲೆಯಲ್ಲಿನ ಹಿಂದೂ ಬ್ರಹ್ಮ ದೇಗುಲ ಇವಾರನ್‍ಗೆ ಪ್ರತಿ ದಿನ ಸಾವಿರಾರು ಬೌದ್ಧ ಧರ್ಮೀಯರು ಭೇಟಿ ನೀಡುತ್ತಾರೆ.
ಜತೆಗೆ, ಅದರ ಸುತ್ತಲೂ ಮೂರು ಪ್ರಮುಖ ಶಾಪಿಂಗ್ ಮಾಲ್‍ಗಳೂ ಇರುವುದರಿಂದ ಇಲ್ಲಿ ಜನಸಂದಣಿ ಹೆಚ್ಚೇ ಇರುತ್ತದೆ. ಸಯೋಮವಾರ ಸ್ಥಳೀಯ ಕಾಲಮಾನ ರಾತ್ರಿ 7 ಗಂಟೆಗೆ ಇಲ್ಲಿ ಪ್ರಬಲ ಬಾಂಬ್ ಸ್ಫೋಟಿಸಿದ್ದು, ಸ್ಫೋಟದ ತೀವ್ರತೆಗೆ ಮೃತರ ದೇಹಗಳೆಲ್ಲ ಚಿಂದಿ ಚಿಂದಿಯಾಗಿ ಬಿದ್ದಿದ್ದವು ಎಂದು ಬಿಬಿಸಿ ವರದಿ ಮಾಡಿದೆ.
ಬಾಂಬ್ ಅನ್ನು ಮಯೋಟಾರು ಸೈಕಲ್‍ನಲ್ಲಿ ಇಡಲಾಗಿದೆ. ಮೃತರ ಪೈಕಿ ನಾಲ್ವರು ವಿದೇಶಿ ಪ್ರಜೆಗಳೂ ಇದ್ದಾರೆ. ಆದರೆ, ಭಾರತೀಯರು ಯಾರೂ ಸ್ಫೋಟದಲ್ಲಿ ಮೃತಪಟ್ಟ ವರದಿ ಸಿಕ್ಕಿಲ್ಲ. ಇದೇ ವೇಳೆ, ಯಾವ ಉಗ್ರ ಸಂಘಟನೆಯೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.