

ಇಸ್ಲಾಮಾಬಾದ್: ಗಡಿ ನಿಯಂತ್ರಣ ರೇಖೆಯಲ್ಲಿ ಹೊಡೆದುರುಳಿಸಿದ್ದ ಡ್ರೋನ್ ನ್ನು ಭಾರತದಿಂದ ನಿರ್ವಹಿಸಲಾಗುತ್ತಿತ್ತು ಎಂಬುದು ವಿಧಿವಿಜ್ಞಾನ ಪರೀಕ್ಷೆಗಳ ಮೂಲಕ ಸಾಬೀತಾಗಿದೆ ಎಂದು ಪಾಕಿಸ್ತಾನ ಹೇಳಿದೆ.
ಪಾಕಿಸ್ತಾನ ಸೇನೆಯ ವಕ್ತಾರರು ಡ್ರೋನ್ ಕುರಿತು ಹೇಳಿಕೆ ನೀಡಿದ್ದು, ಪಾಕಿಸ್ತಾನದಲ್ಲಿ ಹಾರಾಡುತ್ತಿದ್ದ ಡ್ರೋನ್ ಭಾರತದಿಂದ ಬಂದಿತ್ತು. ಹಾಗೂ ಅದನ್ನು ಭಾರತದಿಂದಲೇ ನಿರ್ವಹಿಸಲಾಗುತ್ತಿತ್ತು ಎಂದು ಹೇಳಿದ್ದಾರೆ.
ಪ್ರಾರಂಭದ ಹಂತದಲ್ಲಿ ನಿಯಂತ್ರಣ ರೇಖೆಗೆ ಹತ್ತಿರವೇ ಇತ್ತು, ಪಾಕಿಸ್ತಾನದತ್ತ ನಿರಂತರವಾಗಿ ಕಣ್ಗಾವಲಿಟ್ಟಿತ್ತು. ನಂತರ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನವನ್ನು ಪ್ರವೇಶಿಸಿತ್ತು ಎಂದು ಅಲ್ಲಿನ ಸೇನಾ ಅಧಿಕಾರಿಗಳು ಹೇಳಿದ್ದಾರೆ.
ಭಾರತದಿಂದ ತೆರಳಿದ್ದ ಡ್ರೋನ್ ಪಾಕಿಸ್ತಾನ ಪ್ರವೇಶಿಸುತ್ತಿರುವುದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಕೆಲ ಚಿತ್ರಗಳನ್ನೂ ಸಹ ಪಾಕಿಸ್ತಾನ ಬಿಡುಗಡೆ ಮಾಡಿದೆ. ಇದರಲ್ಲಿ ಡ್ರೋನ್ ಸುತ್ತಮುತ್ತ ಭಾರತದ ಸೈನಿಕರೊಬ್ಬರು ನಿಂತಿದ್ದಾರೆ ಎಂದೂ ಪಾಕಿಸ್ತಾನ ಹೇಳಿದೆ.
ಜು.15 ರಂದು ಡ್ರೋನ್ ಒಂದನ್ನು ಹೊಡೆದುರುಳಿಸಿದ್ದ ಪಾಕಿಸ್ತಾನ ತಾನು ಹೊಡೆದುರುಳಿಸಿರುವುದು ಭಾರತದ ಡ್ರೋನ್ ನ್ನು ಎಂದು ಹೇಳಿತ್ತು. ಆದರೆ ಭಾರತ ಸರ್ಕಾರ ಪಾಕಿಸ್ತಾನದ ಆರೋಪವನ್ನು ತಳ್ಳಿ ಹಾಕಿತ್ತು. ಆ ನಂತರ ಪಾಕಿಸ್ತಾನಕ್ಕೆ ಚೀನಾದಿಂದ ಪೂರೈಕೆಯಾಗಿದ್ದ ತನ್ನದೇ ಡ್ರೋನ್ ನ್ನು ಹೊಡೆದುರುಳಿಸಿದೆ ಎಂಬ ಮಾಹಿತಿ ಬಯಲಾಗಿತ್ತು. ಇದೀಗ ಮತ್ತೊಮ್ಮೆ ಪಾಕಿಸ್ತಾನ ತಾನು ನಾಶ ಮಾಡಿದ್ದ ಡ್ರೋನ್ ಭಾರತದ್ದೇ ಎಂದು ಹೇಳಲಾರಂಭಿಸಿದೆ.