

ಲಂಡನ್: ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಗ್ಲೆಂಡ್‌ಗೆ ನೀಡುವ ಚೊಚ್ಚಲ ಭೇಟಿಯನ್ನು ಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಅಲ್ಲಿನ ಭಾರತೀಯ ಸಮುದಾಯದವರು ಲಂಡನ್‌ನ ಪ್ರಾತಿನಿಧಿಕ ಮಹತ್ವದ ಸ್ಥಳಗಳಿಗೆ ಒಂದು ತಿಂಗಳ ಪ್ರವಾಸವನ್ನು ಕೈಗೊಳ್ಳುವ "ಮೋದಿ ಎಕ್ಸ್‌ಪ್ರೆಸ್ ಬಸ್' ಗೆ ಚಾಲನೆ ನೀಡಿದ್ದಾರೆ.
ಭಾನುವಾರದಂದು ಆರಂಭಿಸಲಾಗಿರುವ ಮೋದಿ ಎಕ್ಸ್‌ಪ್ರೆಸ್ ಬಸ್ಸು "ಲಿಟಲ್ ಇಂಡಿಯಾ' ಎಂದೇ ಖ್ಯಾತಿವೆತ್ತಿರುವ ವೆಂಬ್ಲಿಯ ಈಲಿಂಗ್‌ನಲ್ಲಿ ತನ್ನ ಮೊದಲ ನಿಲುಗಡೆಯನ್ನು ಕೈಗೊಂಡಿತು. ಇದನ್ನು ಅನುಸರಿಸಿ ಈಗಿನ್ನು ದೀಪಾವಳಿ ಹಬ್ಬದ ಆಚರಣೆಯ ಸಲುವಾಗಿ ಈ ಬಸ್ಸು ಟ್ರಾಫಲ್ಗರ್ ಚೌಕಕ್ಕೆ ತೆರಳಲಿದೆ.
"ಯುಕೆ ವೆಲ್‌ಕಮ್ಸ್ ಮೋದಿ' ಎಂಬ ಕಾರ್ಯಕ್ರಮವನ್ನು ಆಯೋಜಿಸಿರುವ ಮಯೂರಿ ಪರಮಾರ್ ಸಮಿತಿಯು "ನಾವು ಭಾರತದಲ್ಲಿ ಚಾಯ್ ಪೇ ಚರ್ಚಾ' ನಡೆಸಿದ್ದೇವೆ; ಇದೀಗ ಬ್ರಿಟನ್‌ನಲ್ಲಿ ಬಸ್ ಪೇ ಚರ್ಚಾ ನಡೆಸಲಿದ್ದೇವೆ' ಎಂದು ಹೇಳಿದೆ. ನವೆಂಬರ್ 13ರಂದು ಪ್ರಧಾನಿ ಮೋದಿ ಬ್ರಿಟನ್ ಗೆ ಭೇಟಿ ನೀಡಲಿದ್ದಾರೆ.