ಮಾಸ್ಕೋ: ಮಾತುಕತೆಗೆ ಮುಖ್ಯ ವಿಷಯಗಳೇ ಇಲ್ಲ ಎಂದು ಪಾಕಿಸ್ತಾನ ಭೇಟಿಯ ಆಹ್ವಾನವನ್ನು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಿರಸ್ಕರಿಸಿದ್ದಾರೆ.
ರಷ್ಯಾದ ಬಂಡವಾಳ ಹೂಡಿಕೆಯ ಉತ್ತರ-ದಕ್ಷಿಣ ಅನಿಲ ಕೊಳವೆಮಾರ್ಗ ಯೋಜನೆಯ ಉದ್ಘಾಟನೆ ಸಮಾರಂಭಕ್ಕೆ ಪಾಲ್ಗೊಳ್ಳಲು ಪ್ರಧಾನಿ ನವಾಝ್ ಶರೀಫ್ ಆಹ್ವಾನ ನೀಡಿದ್ದರು. ಆದರೆ, ಪಾಕಿಸ್ತಾನ ಆಹ್ವಾನವನ್ನು ಪುಟಿನ್ ತಿರಸ್ಕರಿಸಿದ್ದು, ಮಾತುಕತೆ ನಡೆಸಲು ಮುಖ್ಯವಿಷಯಗಳಿಲ್ಲ ಎಂದು ಹೇಳಿದ್ದಾರೆ.
ಒಟ್ಟು 1100 ಕಿಲೋಮೀಟರ್ ಅನಿಲ ಪೈಪ್‍ಲೈನ್ ಇದಾಗಿದ್ದು, ವಾರ್ಷಿಕ 1240 ಘನ ಮೀಟರ್ ಅನಿಲ ಸರಬರಾಜು ಮಾಡುವ ಸಾಮಥ್ರ್ಯ ಹೊಂದಿದೆ. ಇವುಗಳು ಪಾಕಿಸ್ತಾನದ ದಕ್ಷಿಣ ನಗರವಾದ ಕರಾಚಿಯ ದ್ರವೀಕೃತ ನೈಸರ್ಗಿಕ ಅನಿಲ ಘಟಕಗಳಿಗೆ ಉತ್ತರ ನಗರವಾದ ಲಾಹೋರ್‍ನಿಂದ ಸಂಪರ್ಕ ಕಲ್ಪಿಸಲಿದೆ.
ಕಳೆದ ಹಲವು ವರ್ಷಗಳಲ್ಲಿ ಪಾಕಿಸ್ತಾನ ಮತ್ತು ರಷ್ಯಾ ನಡುವೆ ಅನುಷ್ಠಾನಗೊಂಡ ಅತ್ಯಂತ ಪ್ರಮುಖ ಹಾಗೂ ಮೊಟ್ಟಮೊದಲ ಯೋಜನೆ ಇದಾಗಿದೆ. ಇದು ರಷ್ಯನ್ ಕಂಪನಿಗಳಿಗೆ ಪಾಕಿಸ್ತಾನದ ಇಂಧನ ವಲಯದಲ್ಲಿ ಹೊಸ ಮಾರುಕಟ್ಟೆ ಹಾಗೂ ಅವಕಾಶಗಳನ್ನು ಸೃಷ್ಟಿಸಲಿದೆ.
ಹಳೆಯ ಶೀತಲ ಸಮರದ ವೇಳೆ ಎದುರಾಳಿ ರಾಷ್ಟ್ರಗಳಾಗಿದ್ದ ರಷ್ಯಾ ಹಾಗೂ ಪಾಕಿಸ್ತಾನ ಬಲಿಷ್ಠ ಬಾಂಧವ್ಯ ವೃದ್ಧಿಗೊಳಿಸಲು ಸೇನಾ ಹೆಲಿಕಾಫ್ಟರ್ ಗಳ ಮಾರಾಟ ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ಒಳಗೊಂಡಿರುವ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಸಹಿಹಾಕಿದ್ದವು.
ಮಾರ್ಚ್ 26 ರಂದು ರಷ್ಯಾದಲ್ಲಿ ನಡೆಯುತ್ತಿದ್ದ ಪ್ರದರ್ಶನವೊಂದಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನದ 100 ಉದ್ಯಮಿಗಳನ್ನು ಬಂಧಿಸಿದ ರಷ್ಯಾ ಅಧಿಕಾರಿಗಳು ವೀಸಾ ವಿಷಯಕ್ಕೆ ಸಂಬಂಧಿಸಿದಂತೆ ಅವರನ್ನು ಗಡಿಪಾರು ಮಾಡಲಾಗಿತ್ತು.