

ವಾಷಿಂಗ್ಟನ್: ಭೀಭತ್ಸ್ಯ ಕೃತ್ಯಗಳು ಹಾಗೂ ಘನಘೋರ ದಾಳಿಗಳ ಮೂಲಕ ಜಗತ್ತಿನಾದ್ಯಂತ ರಕ್ತದ ಕೊಡಿ ಹರಿಸಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ(ಇಸಿಸ್) ಉಗ್ರ ಸಂಘಟನೆಯ 45 ಸಾವಿರಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಉನ್ನತ ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇಸಿಸ್ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಬಳಿಕ ಇಲ್ಲಿಯವರೆಗೂ ಸುಮಾರು 45 ಸಾವಿರ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಇದೀಗ ಇಸಿಸ್ ಉಗ್ರರ ಸಂಖ್ಯೆ 15 ಸಾವಿರಕ್ಕೆ ಇಳಿದಿದೆ. ಸದ್ಯ ಇಸಿಸ್ ಗುಣಮಟ್ಟ ಇಳಿದಿದೆ ಎಂದು ಲೆಫ್ಟಿನೆಂಟ್ ಜನರಲ್ ಶಾನ್ ಮ್ಯಾಕ್ ಫಾರ್ಲ್ಯಾಂಡ್ ಅವರು ತಿಳಿಸಿದ್ದಾರೆ.
ಇಸಿಸ್ ಭಯೋತ್ಪಾದಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು ನಿಖರ ಸಂಖ್ಯೆ ಕೊಡುವುದು ಕಷ್ಟ. ಉಗ್ರರ ಸಂಖ್ಯೆ 19 ಸಾವಿರದಿಂದ 25 ಸಾವಿರ ಇರಬಹುದು ಎಂದು ಈ ಹಿಂದಿನ ವರದಿಗಳಲ್ಲಿ ಅಂದಾಜಿಸಲಾಗಿತ್ತು. ಆದರೆ ಆ ಸಂಖ್ಯೆ 15 ರಿಂದ 20 ಸಾವಿರದಷ್ಟಿದೆ ಎಂದು ಲೆಫ್ಟಿನೆಂಟ್ ಜನರಲ್ ಹೇಳಿದ್ದಾರೆ.
ಇರಾಕ್ ಹಾಗೂ ಸಿರಿಯಾದಲ್ಲಿ ಇಸಿಸ್ ವಿರುದ್ಧದ ಹೋರಾಟದಲ್ಲಿ ಅಮೆರಿಕ ಬೆಂಬಲಿತ ಪಡೆಗಳ ಕೈ ಮೇಲಾಗುತ್ತಿದೆ. ಇನ್ನು ಇಸಿಸ್ ಸೇರುವ ವಿದೇಶಿ ಭಯೋತ್ಪಾದಕರ ಸಂಖ್ಯೆಯೂ ಇಳಿಕೆಯಾಗಿದೆ. ಇನ್ನು ಇರುವ ಉಗ್ರರಿಗೆ ಸೂಕ್ತ ತರಬೇತಿ ಇಲ್ಲ. ಇದರಿಂದಾಗಿ ಎಲ್ಲ ವಲಯಗಳಲ್ಲೂ ಇಸಿಸ್ ಹಿಂದಡಿ ಇಡುವಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ.