

ವಾಷಿಂಗ್ಟನ್: ಫ್ಲೋರಿಡೋದ ಒರ್ಲಾಂಡೋದಲ್ಲಿ ನೈಟ್ ಕ್ಲಬ್ ನಲ್ಲಿ ನಡೆದ ಶೂಟೌಟ್ ಪ್ರಕರಣವನ್ನು ಉಗ್ರಗಾಮಿಗಳ ಹೇಯ ಕೃತ್ಯ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿದ್ದಾರೆ. ದೇಶದ ಸಲಿಂಗಕಾಮಿಗಳ ಐಕ್ಯತೆ ಮತ್ತು ಸಬಲೀಕರಣದ ಮೇಲೆ ಗುರಿಯಾಗಿಟ್ಟುಕೊಂಡು ಈ ದಾಳಿ ಮಾಡಲಾಗಿದ್ದು, ದೇಶದಲ್ಲಿ ಇಂತಹ ವಾತಾವರಣ ಬೇಕೆ ಎಂಬುದನ್ನು ನಾಗರಿಕರು ನಿರ್ಧರಿಸಬೇಕು ಎಂದು ಅವರು ಒತ್ತಾಯಿಸಿದರು.
ಶೂಟ್ ಮಾಡಿದವನ ಉದ್ದೇಶ ಏನಾಗಿತ್ತು ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ, ಘಟನೆ ಬಗ್ಗೆ ಎಫ್ ಬಿಐ ತನಿಖೆ ನಡೆಸಲಿದೆ ಎಂದು ಒಬಾಮಾ ತಿಳಿಸಿದರು.ಶೂಟ್ ಮಾಡಿರುವ ವ್ಯಕ್ತಿ ಒಮರ್ ಮಟೀನ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದನೇ ಎಂಬುದನ್ನು ಅಧಿಕಾರಿಗಳು ಕೂಡಲೇ ಪತ್ತೆಹಚ್ಚಬೇಕೆಂದು ಅವರು ಆಗ್ರಹಿಸಿದ್ದಾರೆ.
ಇದೊಂದು ಉಗ್ರಗಾಮಿಗಳ ದ್ವೇಷದ ಕೃತ್ಯವಾಗಿದೆ. ಅಮೆರಿಕದ ಎಲ್ಲಾ ಪ್ರಜೆಗಳು ಈ ಘಟನೆ ವಿರುದ್ಧ ಒಟ್ಟಾಗಿ ಸಿಟ್ಟು, ಆಕ್ರೋಶ ವ್ಯಕ್ತಪಡಿಸಬೇಕು. ನಮ್ಮ ದೇಶದ ನಾಗರಿಕರ ರಕ್ಷಣೆಗೆ ಹೋರಾಡಬೇಕು ಎಂದರು.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪೋಪ್ ಫ್ರಾನ್ಸಿಸ್, ಮುಗ್ಧ ಜನರು ಭೀಕರ ದಾಳಿಗೆ ಬಲಿಯಾಗಿದ್ದು, ನಮ್ಮಲ್ಲಿ ಭಯಾನಕ, ಖಂಡನೆ ಮತ್ತು ನೋವಿನ ಭಾವನೆಗಳನ್ನು ಒಟ್ಟಿಗೆ ತಂದಿದೆ ಎಂದು ಹೇಳಿದ್ದಾರೆ.
ಶೂಟೌಟ್ ನಲ್ಲಿ ಬಲಿಯಾದವರ ಶ್ರದ್ಧಾಂಜಲಿಗೆ ಅವರ ಕುಟುಂಬದವರ ಜೊತೆ ಪೋಪ್ ಭಾಗವಹಿಸಲಿದ್ದಾರೆ ಎಂದು ವಾಟಿಕನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.