

ಲಂಡನ್: ಜನ ಪ್ರತಿನಿಧಿಯೋರ್ವರನ್ನು ಗುಂಡಿಟ್ಟು ಹತ್ಯೆಗೈದ ಘಟನೆ ಬ್ರಿಟನ್ ನಲ್ಲಿ ನಡೆದಿದ್ದು, ಲೇಬರ್ ಪಕ್ಷದ ಸಂಸದೆ ಜೋ ಕೋಕ್ಸ್ ರನ್ನು ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ.
ಮೂಲಗಳ ಪ್ರಕಾರ ಇಂಗ್ಲೆಂಡ್ ದೇಶವನ್ನು ಐರೋಪ್ಯ ಒಕ್ಕೂಟದಲ್ಲೇ ಉಳಿಸುವುದಕ್ಕಾಗಿ ಹೋರಾಟ ನಡೆಸುತ್ತಿದ್ದ ಬ್ರಿಟನ್ ಎಂಪಿ ಜೋ ಕೋಕ್ಸ್ ಅವರಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿತ್ತು. ಇದೇ ಹಿನ್ನಲೆಯಲ್ಲಿ ಗುರುವಾರ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಉತ್ತರ ಇಂಗ್ಲೆಂಡ್ ನ ಬ್ರಿಸ್ಟಾಲ್ ನಲ್ಲಿ ನಿನ್ನೆ ಮಧ್ಯಾಹ್ನ ಸುಮಾರು 1 ಗಂಟೆ ಸುಮಾರಿನಲ್ಲಿ ಸಂಸದೆ ಕೋಕ್ಸ್ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಘಟನೆಯಲ್ಲಿ 77 ವರ್ಷದ ಓರ್ವ ವೃದ್ಧ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳೀಯ ಪ್ರತ್ಯಕ್ಷ ದರ್ಶಿಗಳು ಹೇಳುವಂತೆ ಲೇಬರ್ ಪಕ್ಷದ ಸಂಸದೆಯಾಗಿದ್ದ ಕೋಕ್ಸ್ ಮೇಲೆ ಬ್ರಿಸ್ಟಾಲ್ನ ಹಳ್ಳಿಯಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು, ಗುಂಡಿನ ದಾಳಿ ಬಳಿಕ ದುಷ್ಕರ್ವಿು ಅವರನ್ನು ಥಳಿಸಿದ್ದ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 52 ವರ್ಷದ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಹತ್ಯೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಇನ್ನು ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಕೊಲಿನ್ಸ್ ಅವರು, ಘಟನಾ ಸ್ಥಳದಿಂದ ಕೆಲ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ವಿಶ್ವದ ನಾನಾ ದೇಶಗಳಲ್ಲಿ ಜನಪ್ರತಿನಿಧಿಗಳ ಮೇಲಿನ ಹಲ್ಲೆ ಸಾಮಾನ್ಯವಾಗಿದ್ದರೂ, ಬ್ರಿಟನ್ ನಂತಹ ದೇಶದಲ್ಲಿ ಇಂತಹ ಘಟನೆಗಳು ತೀರಾ ವಿರಳ. ಆದರೆ ಗುರುವಾರ ನಡೆದ ಘಟನೆ ಇದಕ್ಕೆ ತದ್ವಿರುದ್ಧದಂತಿದ್ದು, ಹಾಡಹಗಲೇ ಬ್ರಿಟನ್ ಸಂಸದೆ ಮೇಲೆ ದುಷ್ಕರ್ಮಿ ಗುಂಡಿನ ದಾಳಿ ಮಾಡಿದ್ದಷ್ಟೇ ಅಲ್ಲದೇ ಬಳಿಕ ಮನಸೋ ಇಚ್ಛೆ ಥಳಿಸಿರುವುದು ಬ್ರಿಟನ್ ಕಾನೂನು ಸುವ್ಯವಸ್ಥೆ ಮೇಲೆ ಶಂಕೆ ಮೂಡುವಂತಾಗಿದೆ.