ಭಾರತಕ್ಕೆ ಟಾಂಗ್ ನೀಡಿದ ನೇಪಾಳ; ಚೀನಾದೊಂದಿಗಿನ ವ್ಯವಹಾರ ದುಪ್ಪಟ್ಟು

ನೇಪಾಳ ಮತ್ತು ಭಾರತ ದೇಶಗಳ ನಡುವಿನ ಸಂಬಂಧ ಹಳಸಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ದೊರೆತಿದ್ದು, ನೇಪಾಳ ಸರ್ಕಾರ ಬಿಡುಗಡೆ ಮಾಡಿರುವ ಆರ್ಥಿಕ ನೆರವು ನೀಡಿದ ಟಾಪ್ 5 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಕಳೆದುಕೊಂಡಿದೆ...
ಪ್ರಧಾನಿ ಕೆಪಿ ಒಲಿ ಮತ್ತು ಚೀನಾ ಪ್ರಧಾನಿ (ಸಂಗ್ರಹ ಚಿತ್ರ)
ಪ್ರಧಾನಿ ಕೆಪಿ ಒಲಿ ಮತ್ತು ಚೀನಾ ಪ್ರಧಾನಿ (ಸಂಗ್ರಹ ಚಿತ್ರ)

ನವದೆಹಲಿ: ನೇಪಾಳ ಮತ್ತು ಭಾರತ ದೇಶಗಳ ನಡುವಿನ ಸಂಬಂಧ ಹಳಸಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ದೊರೆತಿದ್ದು, ನೇಪಾಳ ಸರ್ಕಾರ ಬಿಡುಗಡೆ ಮಾಡಿರುವ ಆರ್ಥಿಕ ನೆರವು  ನೀಡಿದ ಟಾಪ್ 5 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಕಳೆದುಕೊಂಡಿದೆ.

ಕಳೆದ ಐದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಭಾರತ ದೇಶ ನೇಪಾಳದ ಆರ್ಥಿಕ ನೆರವಿನ ಟಾಪ್ 5 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನಕಳೆದುಕೊಂಡಿದ್ದು, ಚೀನಾ ದೇಶ ಮೊದಲ ಸ್ಥಾನಕ್ಕೇರಿದೆ.  ನೇಪಾಳದಲ್ಲಿ ಪ್ರಧಾನಿ ಕೆ.ಪಿ.ಒಲಿ ಸರ್ಕಾರವನ್ನು ಉರುಳಿಸಲು ಭಾರತದ ರಾಯಭಾರಿ ಪ್ರಯತ್ನಿಸಿದ್ದರು ಎಂಬ ಆರೋಪದ ಮಧ್ಯೆಯೇ ನೇಪಾಳ ಸರ್ಕಾರ ಆರ್ಥಿಕ ನೆರವು ನೀಡಿದ ರಾಷ್ಟ್ರಗಳ  ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 2014-15ರ ವಿತ್ತ ವರ್ಷದಲ್ಲಿ ಭಾರತ ನೀಡಿರುವ ನೆರವು ಅತ್ಯಂತ ಕಡಿಮೆಯಾಗಿದೆ.

2014-2015ರ ವಿತ್ತ ವರ್ಷದಲ್ಲಿ ಚೀನಾ ಸರ್ಕಾರ ನೇಪಾಳಕ್ಕೆ 250 ಕೋಟಿ ರು. ನೆರವು ನೀಡಿದ್ದರೆ, ಭಾರತ 150 ಕೋಟಿ ರು. ನೀಡಿದೆ. ನೇಪಾಳಕ್ಕೆ ಹಣಕಾಸು ನೆರವು ನೀಡಿದ ಪ್ರಮುಖ ಐದು  ದೇಶಗಳ ಪಟ್ಟಿಯಲ್ಲಿ ಭಾರತ ಸ್ಥಾನ ಕಳೆದುಕೊಂಡಿರುವುದು ಕಳೆದ 5 ವರ್ಷಗಳಲ್ಲಿ ಇದೇ ಮೊದಲು. ಇಂಗ್ಲೆಂಡ್, ಅಮೆರಿಕ, ಜಪಾನ್ ನೇಪಾಳಕ್ಕೆ ಭಾರತಕ್ಕಿಂತ ಹೆಚ್ಚಿನ ಹಣಕಾಸು ನೆರವು  ಒದಗಿಸಿವೆ ಎಂದು ಪಟ್ಟಿಯಿಂದ ತಿಳಿದುಬಂದಿದೆ.

ಈ ಹಿಂದೆ ನೇಪಾಳದ ಸಾಕಷ್ಟು ಸಮಸ್ಯೆಗಳಿಗೆ ಭಾರತ ಸರ್ಕಾರ ಸ್ಪಂದಿಸಿದ್ದು, ನೇಪಾಳ ಭೂಕಂಪ ಪೀಡಿತ ಪ್ರದೇಶದ ಮರುನಿರ್ಮಾಣಕ್ಕೆ ಭಾರತ 10 ಸಾವಿರ ಕೋಟಿ ರು. ನೀಡಿದೆ. ಇದಲ್ಲದೆ  ನೇಪಾಳದಲ್ಲಿ ವಿದ್ಯಾರ್ಥಿವೇತನ ಸೇರಿ ಹಲವು ಸೌಲಭ್ಯಗಳನ್ನು ಭಾರತ ಕಲ್ಪಿಸಿದೆ. ಆದರೆ ಚೀನಾ ಮತ್ತಿತರ ರಾಷ್ಟ್ರಗಳು ನೇಪಾಳಕ್ಕೆ ಇದಕ್ಕಿಂತ ಹೆಚ್ಚಿನ ನೆರವು ನೀಡಿದೆ ಎಂದು ವರದಿಯಲ್ಲಿ  ತಿಳಿಸಲಾಗಿದೆ.

ಹಳಸುತ್ತಿರುವ ನೇಪಾಳ-ಭಾರತ ಸಂಬಂಧ
ಈಗ್ಗೆ 10 ವರ್ಷಗಳ ಹಿಂದೆ ಅಂದರೆ 2006ರಲ್ಲಿ ನೇಪಾಳದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಎಲ್ಲ 8 ಪಕ್ಷಗಳನ್ನೂ ಒಂದುಗೂಡಿಸಲು ಪ್ರಯತ್ನಿಸಿದ್ದಾಗ ಭಾರತದ ಬಗ್ಗೆ ಹೊಗಳಿಕೆ ಕೇಳಿಬರುತ್ತಿತ್ತು.  ಆದರೆ ಕಳೆದ ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಆಗ ಒಂದಾಗಿದ್ದ ಪಕ್ಷಗಳೇ ಈಗ ಶತ್ರುಗಳಾಗಿವೆ. ಭಾರತಕ್ಕೆ ನೇಪಾಳ ರಾಯಭಾರಿಯಾಗಿರುವ ದೀಪ್ ಕುಮಾರ್  ಉಪಾಧ್ಯಾಯರನ್ನು ಹಿಂದಕ್ಕೆ ಕರೆಸಿಕೊಂಡಿದ್ದು, ರಾಜಕೀಯ ಅಸ್ಥಿರತೆಗೆ ಅವರೇ ಕಾರಣ ಎಂದು ನೇಪಾಳ ಮುಖಂಡರು ಕಿಡಿಕಾರಿದ್ದಾರೆ.

ಕೆ.ಪಿ.ಒಲಿ  ನೇತೃತ್ವದ ನೇಪಾಳ ಸರ್ಕಾರವನ್ನು ಪತನಗೊಳಿಸಲು ಭಾರತ ಯತ್ನಿಸಿತ್ತು ಎಂಬ ಆರೋಪ ಭಾರತ-ನೇಪಾಳ ನಡುವೆ  ವೈಮನಸ್ಸು ಹೆಚ್ಚಿಸಿದ್ದು, ನೇಪಾಳಿ ಕಾಂಗ್ರೆಸ್ ಮುಖ್ಯಸ್ಥ  ಶೇರ್ ಬಹಾದುರ್ ದೇವುಬಾ ಹಾಗೂ ಮಾವೊವಾದಿ ಮುಖಂಡ ಕೆ.ಬಿ.ಮಹಾರಾ ದೆಹಲಿಗೆ ಆಗಮಿಸಿ ವಾಪಸಾಗುತ್ತಿದ್ದಂತೆಯೇ ಸರ್ಕಾರ ಪತನ ಪ್ರಯತ್ನ ನಡೆದಿದೆ ಎನ್ನಲಾಗಿತ್ತು. ಮೈತ್ರಿಕೂಟದ  ಪ್ರಮುಖ ಪಕ್ಷ ಯುಸಿಪಿಎನ್‌ಎಂ ಬೆಂಬಲ ಹಿಂಪಡೆಯಲು ಕೆಪಿ ಒಲಿ ಅವರ ಪಕ್ಷ ನಿರ್ಧರಿಸಿತು. ಆದರೆ ಇದಕ್ಕೆ ಪಕ್ಷದೊಳಗೆ ವಿರೋಧ ವ್ಯಕ್ತವಾಗಿದ್ದಲ್ಲದೇ, ಬಜೆಟ್ ನಂತರ ಪ್ರಧಾನಮಂತ್ರಿ  ಪಟ್ಟವನ್ನು ಯುಸಿಪಿಎನ್‌ಎಂ ಮುಖಂಡ ಪುಷ್ಪಕುಮಾರ್ ದಹಾಲ್‌ಗೆ ಬಿಟ್ಟುಕೊಡುವುದಾಗಿ ಪ್ರಧಾನಿ ಕೆ.ಪಿ. ಒಲಿ ಭರವಸೆ ನೀಡಿದರು. ನಂತರ ಬೆಂಬಲ ಹಿಂಪಡೆಯುವ ನಿರ್ಧಾರವನ್ನು   ಯುಸಿಪಿಎನ್‌ಎಂ ಕೈಬಿಟ್ಟಿತು.

ಮತ್ತೊಂದೆಡೆ ಈ ಹಿಂದೆ ನೇಪಾಳಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಸಂಸತ್‌ನಲ್ಲಿ ಮಾತನಾಡುವಾಗ ಸಂವಿಧಾನದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆಂತರಿಕ ವಿಚಾರದಲ್ಲಿ ಭಾರತ  ತಲೆಹಾಕಬಾರದು ಎಂಬ ಅಭಿಪ್ರಾಯ ಅಲ್ಲಿನ ಎಲ್ಲ ಪಕ್ಷಗಳಿಂದ ಕೇಳಿ ಬಂದಿತ್ತು. ಸಂವಿಧಾನ ಅನುಮೋದನೆಗೊಂಡಾಗ ಮಧೇಸಿ ಜನಾಂಗದ ಪ್ರತಿಭಟನೆ ಮತ್ತು ಗಡಿಯಲ್ಲಿ ವಹಿವಾಟು  ಸ್ಥಗಿತಗೊಂಡಿದ್ದು ಉಭಯ ದೇಶಗಳ ನಡುವೆ ದೊಡ್ಡ ಕಂದಕವನ್ನೇ ನಿರ್ಮಿಸಿತು.

ಇನ್ನು ಇತ್ತೀಚೆಗೆ ಈ ಎಲ್ಲ ಬೆಳವಣಿಗೆಗಳಿಂದ ಆಕ್ರೋಶಗೊಂಡಿರುವ ನೇಪಾಳ ಸರ್ಕಾರ ಅಧ್ಯಕ್ಷೆ ಬಿದ್ಯಾ ಭಂಡಾರಿ ಭಾರತ ಭೇಟಿಯನ್ನೂ ರದ್ದುಗೊಳಿಸಿದೆ. ಹೀಗಾಗಿ ಈ ಪರಿಸ್ಥಿತಿಯ ಲಾಭ  ಪಡೆಯುತ್ತಿರುವ ಚೀನಾ ಸರ್ಕಾರ ನೇಪಾಳಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡುವ ಮೂಲಕ ನೇಪಾಳಕ್ಕೆ ಹತ್ತಿರವಾಗಲು ಪ್ರಯತ್ನಿಸುತ್ತಿದೆ. ಮಧೇಸಿ ಪ್ರತಿಭಟನೆ ವೇಳೆ ಭಾರತ- ನೇಪಾಳ ಗಡಿ  ಬಂದ್ ಆಗಿದ್ದ ಸಂದರ್ಭದಲ್ಲಿ ನೇಪಾಳ ಸರ್ಕಾರ ಚೀನಾ ಮೊರೆ ಹೋಗಿತ್ತು. ನೇಪಾಳಕ್ಕೆ ತೈಲ, ಅಗತ್ಯ ಸಾಮಗ್ರಿಗಳನ್ನು ಚೀನಾ ಪೂರೈಸಿತ್ತು. ಅಲ್ಲದೆ ನೇಪಾಳದಲ್ಲಿ ಹಲವು ಮೂಲಸೌಕರ್ಯ  ಯೋಜನೆಗಳನ್ನೂ ಚೀನಾ ಕೈಗೊಂಡಿದೆ. ಕೆ.ಪಿ.ಒಲಿ ಸರ್ಕಾರ ಚೀನಾ ಪರ ಒಲವು ಹೊಂದಿರುವುದೂ ಇದಕ್ಕೆ ಕಾರಣ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com