

ಇಸ್ಲಾಮಾಬಾದ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಾಧಿಸಿದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿಜಯದ ನಂತರ, ಕಾಶ್ಮೀರ ವಿಷಯದಲ್ಲಿ ಅಮೆರಿಕ ಅಧ್ಯಕ್ಷರು ನೆರವು ನೀಡುತ್ತಾರೆ ಎಂದು ಪಾಕಿಸ್ತಾನಿಯರು ನಂಬಿದ್ದಾರೆ.
ಕಾಶ್ಮೀರ ವಿಷಯವಾಗಿ ಉಪಖಂಡದಲ್ಲಿ ಆಗಾಗ್ಗೆ ತಲೆದೋರುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಪಾಕಿಸ್ತಾನ ಟ್ರಂಪ್ ಮೊರೆ ಹೋಗಲಿದೆ ಎಂದು ಹೇಳಲಾಗಿದೆ. ಟ್ರಂಪ್ ಗೆಲುವಿನ ಸಂಬಂಧ ತಮ್ಮ ಮೊದಲ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಹೊಸ ಅಧ್ಯಕ್ಷರ ಹೊಸ ಆಡಳಿತದಲ್ಲಿ ಪಾಕಿಸ್ತಾನ ಮತ್ತು ಅಮೆರಿಕಾ ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಪಾಕ್ ವ್ಯಾಖ್ಯಾನಿಸಿದೆ.
ಸಾಮಾನ್ಯ ಹಿತಾಸಕ್ತಿ ಹಾಗೂ ಹೊಸ ಆಡಳಿತದಲ್ಲಿ ಎರಡು ದೇಶಗಳ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ ಎಂದು ಪಾಕಿಸ್ತಾನ ವಿದೇಶಾಂಗ ವಕ್ತಾರ ನಕೀರ್ ಝಕಾರಿಯಾ ಹೇಳಿದ್ದಾರೆ.
ಒಂದು ವೇಳೆ ನಾನು ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೇ ಭಾರತ ಮತ್ತು ಪಾಕಿಸ್ತಾನ ಸಮಸ್ಯೆಗಳ ಬಗೆಹರಿಸಲು ಮಧ್ಯವರ್ತಿಯಾಗಿ ಕೆಲಸ ಮಾಡುತ್ತೇನೆ ಎಂದು ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಹೇಳಿದ್ದಾರೆ.