ನಾವು ಕಾಶ್ಮೀರಕ್ಕೋ, ಕಾಲಾಪಾನಿಗೋ ನುಗ್ಗಿದರೆ ಏನು ಮಾಡುತ್ತೀರಿ?- ಭಾರತಕ್ಕೆ ಚೀನಾ

ಸಿಕ್ಕಿಂ ಸಮೀಪದ ಡೋಕ್ಲಾಮ್ ಪ್ರದೇಶ ಸಂಬಂಧ ಕಳೆದ 50 ದಿನಗಳಿಂದ ಉದ್ಭವಿಸಿರುವ ಬಿಕ್ಕಟ್ಟಿನ ಕುರಿತು ಮತ್ತೆ ಭಾರತಕ್ಕೆ ಬೆದರಿಕೆ ಹಾಕುವ ಯತ್ನಗಳನ್ನು ಮುಂದುವರೆಸಿರುವ ಚೀನಾ,...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಸಿಕ್ಕಿಂ ಸಮೀಪದ ಡೋಕ್ಲಾಮ್ ಪ್ರದೇಶ ಸಂಬಂಧ ಕಳೆದ 50 ದಿನಗಳಿಂದ ಉದ್ಭವಿಸಿರುವ ಬಿಕ್ಕಟ್ಟಿನ ಕುರಿತು ಮತ್ತೆ ಭಾರತಕ್ಕೆ ಬೆದರಿಕೆ ಹಾಕುವ ಯತ್ನಗಳನ್ನು ಮುಂದುವರೆಸಿರುವ ಚೀನಾ, ಇದೇ ಮೊದಲ ಬಾರಿಗೆ ಡೋಕ್ಲಾಮ್ ಬಿಕ್ಕಟ್ಟು ವಿಚಾರವಾಗಿ ಕಾಶ್ಮೀರ ವಿವಾದವನ್ನು ಎಳೆದು ತಂದಿದೆ. 
ಕಾಶ್ಮೀರಕ್ಕೋ, ಉತ್ತರಾಖಂಡದ ಕಾಲಾಪಾನಿಗೋ ಚೀನಿ ಯೋಧರು ನುಗ್ಗಿದರೆ ಏನು ಮಾಡುತ್ತೀರಿ? ಎಂದು ಪ್ರಶ್ನೆ ಮಾಡಿರುವ ಚೀನಾ ಈ ಹಂತದಲ್ಲಿ ಭಾರತದ ಜೊತೆಗೆ ಮಾತುಕತೆ ನಡೆಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಪ್ರಸ್ತುತ ಮಾತುಕತೆ ನಡೆಸಿದರೆ ನಮ್ಮ ಜನರ ದೃಷ್ಟಿಯಲ್ಲಿ ನಾನು ಅಸಮರ್ಥರೆನಿಸಿಕೊಳ್ಳುತ್ತೇವೆಂದು ಹೇಳಿದೆ. 
ಭಾರತೀಯ ಪತ್ರಕರ್ತರ ಜೊತೆಗೆ ಮಾತನಾಡಿರುವ ಅವರು ಚೀನಾದ ವಿದೇಶಾಂಗ ಸಚಿವಾಲಯದ ಗಡಿ ಮತ್ತು ಸಾಗರೋತ್ತರ ವಿಭಾಗದ ಉಪ ನಿರ್ದೇಶಕ ವಾಂಗ್ ವೆನ್ಲಿಯವರು, ಭಾರತದ ಒಬ್ಬನೇ ಒಬ್ಬ ಯೋಧ ಒಂದೇ ಒಂದು ದಿನ ವಿವಾದಿತ ಸ್ಥಳದಲ್ಲಿದ್ದರೂ ಅದು ಚೀನಾದ ಸಾರ್ವಭೌಮತ್ವಕ್ಕೆ ಆದ ಧಕ್ಕೆಯಾಗುತ್ತದೆ. ಈ ಸಮಯದಲ್ಲಿ ಭಾರತದ ಜೊತೆಗೆ ಯಾವುದೇ ಕಾರಣಕ್ಕೂ ಮಾತುಕತೆ ನಡೆಸಲು ಸಾಧ್ಯವೇ ಇಲ್ಲ. ಒಂದು ವೇಳೆ ನಡೆಸಿದ್ದೇ ಆದರೆ, ನಮ್ಮ ಸರ್ಕಾರ ಅಸಮರ್ಥ ಎಂದು ನಮ್ಮ ಜನರು ತಿಳಿಯುತ್ತಾರೆಂದು ಹೇಳಿದ್ದಾರೆ. 
ಮೂರು ದೇಶಗಳ ಗಡಿ ಕೂಡುವ ಸ್ಥಳವನ್ನು ಭಾರತ ನೆಪ ಮಾಡಿಕೊಳ್ಳುತ್ತಿದೆ. ಭಾರತ ಕೂಡ ಹಲವು ತ್ರಿವಳಿ ಸಂಗಮಗಳನ್ನು ಹೊಂದಿದೆ. ಒಂದು ವೇಳೆ ಭಾರತ-ಚೀನಾ-ನೇಪಾಳ ಗಡಿಯಲ್ಲಿ ಬರುವ ಕಾಲಾಪಾನಿ ಹಾಗೂ ಭಾರತ-ಪಾಕಿಸ್ತಾನ ನಡುವಣ ಕಾಶ್ಮೀರ ವಲಯಕ್ಕೆ ನಾವು ಪ್ರವೇಶಿಸಿದರೆ ಭಾರತ ಏನು ಮಾಡಲಿದೆ ಎಂದು ಪ್ರಶ್ನಿಸಿದ್ದಾರೆ. 
ಇದೇ ವೇಳೆ ವಿವಾದ ಸಂಬಂಧ ಚೀನಾ ಭಾರತದ ಮೇಲೆ ಯುದ್ಧ ಮಾಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಚೀನಾ ಸೇನೆ ಹಾಗೂ ಚೀನಾ ಸರ್ಕಾರ ತನ್ನದೇ ಆದ ನಿರ್ಣಯ ಹಾಗೂ ನಿಲುವುಗಳನ್ನು ಹೊಂದಿದೆ. ಒಂದು ವೇಳೆ ಭಾರತೀಯ ಸೇನೆ ತಪ್ಪು ದಾರಿಗೆ ಹೋದರೆ, ಅಥವಾ ವಿವಾದ ಸಂಬಂಧ ನಮ್ಮ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದೇ ಆದರೆ, ಅಂತರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ನಮ್ಮ ಹಕ್ಕುಗಳನ್ನು ಕಾಪಾಡುವ ಸಲುವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. 
ಡೋಕ್ಲಾಮ್ ವಿವಾದ ಸಂಬಂಧ ಭಾರತ ಹಾಗೂ ಚೀನಾ ನಡುವೆ ಹಲವು ದಿನಗಳಿಂದೂ ವಾಕ್ಸಮರ ಮುಂದುವರೆಯುತ್ತಲೇ ಇದೆ. ಚೀನಾ ವಿದ್ವಾಂಸರೊಬ್ಬರು ಸರ್ಕಾರಿ ಮಾಧ್ಯಮದ ಮೂಲಕ ಕೆಲ ದಿನಗಳ ಹಿಂದೆ ಡೋಕ್ಲಾಮ್ ಬಿಕ್ಕಿಟ್ಟಿನಲ್ಲಿ ಕಾಶ್ಮೀರ ವಿಚಾರವನ್ನು ಎಳೆದು ತಂದಿದ್ದರು. ಆದರೆ, ಸರ್ಕಾರಿ ಅಧಿಕಾರಿಯೊಬ್ಬರು ಈ ವಿಷಯವನ್ನು ಪ್ರಸ್ತಾಪಿಸುತ್ತಿರುವುದು ಇದೇ ಮೊದಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com