
ಬೀಜಿಂಗ್: ಭಾರತ ಮತ್ತು ಚೀನಾ ನಡುವಿನ ಡೊಕ್ಲಾಂ ಗಡಿ ವಿವಾದ ಕಗ್ಗಂಟಾಗಿಯೇ ಮುಂದುವರೆದಿದ್ದು, ಭಾರತದ ಒತ್ತಡಕ್ಕೆ ಮಣಿದು ಚೀನಾ ಸರ್ಕಾರ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿಲ್ಲ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ.
ನಿನ್ನೆಯಷ್ಟೇ ಭಾರತದಲ್ಲಿ ಭಾರತೀಯ ಸೇನೆ ಗಡಿ ಗ್ರಾಮಗಳ ನಿವಾಸಿಗಳನ್ನು ತೆರುವುಗೊಳಿಸುತ್ತಿದೆ ಎಂಬ ಸುದ್ದಿ ಬಿತ್ತರವಾದ ಬಿನ್ನಲ್ಲೇ ಅತ್ತ ಚೀನಾ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ಸೂಚಿಸಿದೆ ಎಂಬ ಸುದ್ದಿಗಳು ವ್ಯಾಪಕ ವೈರಲ್ ಆಗಿತ್ತು. ಆದರೆ ಇದೀಗ ಸ್ವತಃ ಚೀನಾ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಗಡಿಯಲ್ಲಿರುವ ಚೀನಿ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಮಾಧ್ಯಮಗಳ ವರದಿ ಸುಳ್ಳು ಎಂದು ಹೇಳಿದೆ.
ವಿವಾದಿತ ಡೊಕ್ಲಾಂ ಪ್ರದೇಶದಲ್ಲಿರುವ ಸೈನಿಕರು 250 ಮೀಟರ್ ಹಿಂದಕ್ಕೆ ವಾಪಸ್ ಹೋದ ಹಿನ್ನಲೆಯಲ್ಲಿ ಚೀನಾ ಕೂಡ ತನ್ನ ಸೈನಿಕರು ಹಿಂದಕ್ಕೆ ಕರೆಸಿಕೊಂಡಿತ್ತು. ಅದರಂತೆ ಚೀನೀ ಸೈನಿಕರು 100 ಮೀಟರ್ ಹಿಂದಕ್ಕೆ ಸರಿದಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ವರದಿಗಳನ್ನು ಅಲ್ಲಗಳೆದಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರರು, ಬೀಜಿಂಗ್ ತನ್ನ ಪ್ರಾದೇಶಿಕ ಸಾರ್ವಭೌಮತ್ವದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಸಂಧಾನ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಡೊಕ್ಲಾಂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚೀನಾದ ನಿಲುವು ಒಂದೇ ಆಗಿದ್ದು, ಮೊದಲು ಭಾರತ ತನ್ನ ಸೈನಿಕರನ್ನು ಬೇಷರತ್ತಾಗಿ ಹಿಂದಕ್ಕೆ ಕರೆಸಿಕೊಳ್ಳಬೇಕು. ಆಗಷ್ಟೇ ನಾವು ನಮ್ಮ ನಿಲುವು ಸ್ಪಷ್ಟಪಡಿಸುತ್ತೇವೆ ಎಂದು ಹೇಳಿದ್ದಾರೆ.
Advertisement