ಸೇನೆ ಹಿಂದಕ್ಕೆ ಕರೆಸಿಕೊಳ್ಳದ ಹೊರತು ಭಾರತದೊಂದಿಗೆ ನದಿ ನೀರಿನ ವಿವರ ಹಂಚಿಕೊಳ್ಳುವುದಿಲ್ಲ - ಚೀನಾ

ಡೋಕ್ಲಾಮ್ ಗಡಿ ವಿವಾದ ಸಂಬಂಧ ಭಾರತದೊಂದಿಗೆ ಯುದ್ಧೋತ್ಸಾಹ ತೋರುತ್ತಿರುವ ಚೀನಾ ಒಂದಲ್ಲ ಒಂದು ರೀತಿ ಕ್ಯಾತೆಯನ್ನು ತೆಗೆಯುತ್ತಲೇ ಇದ್ದು, ಇದೀಗ ಗಡಿಯಲ್ಲಿ ತನ್ನ ಸೇನೆಯನ್ನು ಹಿಂದಕ್ಕೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಡೋಕ್ಲಾಮ್ ಗಡಿ ವಿವಾದ ಸಂಬಂಧ ಭಾರತದೊಂದಿಗೆ ಯುದ್ಧೋತ್ಸಾಹ ತೋರುತ್ತಿರುವ ಚೀನಾ ಒಂದಲ್ಲ ಒಂದು ರೀತಿ ಕ್ಯಾತೆಯನ್ನು ತೆಗೆಯುತ್ತಲೇ ಇದ್ದು, ಇದೀಗ ಗಡಿಯಲ್ಲಿ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳದ ಹೊರತು ಭಾರತದೊಂದಿಗೆ ನದಿ ನೀರಿನ ವಿವರವನ್ನು ಹಂಚಿಕೊಳ್ಳುವುದಿಲ್ಲ ಎಂದು ಚೀನಾ ಹೇಳಿಕೊಂಡಿದೆ.

ಈ ಕುರಿತಂತೆ ಚೀನಾದ ಅಂತರಾಷ್ಟ್ರೀಯ ಸಂಬಂಧಗಳ ಸಂಸ್ಥೆ ಶಾಂಘೈ ಅಕಾಡೆಮಿ ಆಫ್ ಸೋಶಿಯನ್ ಸೈನ್ಸ್ ಹೇಳಿಕೊಂಡಿದ್ದು, ನೆರೆ ರಾಷ್ಟ್ರದ ಸಾರ್ವಭೌಮತ್ವಕ್ಕೆ ಭಾರತ ಯಾವುದೇ ಬೆಲೆಯನ್ನು ನೀಡದಿದ್ದಾಗ ಚೀನಾ ಕೂಡ ತನ್ನ ಬಾಧ್ಯತೆಗಳನ್ನು ಪೂರೈಸಬೇಕೆಂದು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು ಎಂದು ಹೇಳಿದೆ. 

ಡೋಕ್ಲಾಮ್ ಗಡಿಯಲ್ಲಿ ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳದ ಹೊರತು ಬ್ರಹ್ಮಪುತ್ರ ನದಿ ನೀರಿನ ವಿವರವನ್ನು ಚೀನಾ ಭಾರತದೊಂದಿಗೆ ಹಂಚಿಕೊಳ್ಳುವುದಿಲ್ಲ. ನದಿ ನೀರಿನ ವಿಚಾರದಲ್ಲಿ ಭಾರತದೊಂದಿಗೆ ಎಂದಿನಂತೆ ಸಾಮಾನ್ಯ ಸಹಕಾರದಿಂದ ನಡೆದುಕೊಳ್ಳಲು ಸಾಧ್ಯವಿಲ್ಲ. ಚೀನಾ ಜವಾಬ್ದಾರಿಯುತ ರಾಷ್ಟ್ರವಾಗಿದ್ದು, ನೆರೆರಾಷ್ಟ್ರದ ಸಾರ್ವಭೌಮತ್ವಕ್ಕೆ ಗೌರವ ನೀಡದ ಭಾರತದೊಂದಿಗೆ ನಾವೂ ಕೂಡ ನಮ್ಮ ಜವಾಬ್ದಾರಿಗಳನ್ನು ಪೂರ್ಣಗೊಳಿಸುವುದಿಲ್ಲ ಎಂದು ತಿಳಿಸಿದೆ. 

ಡೋಕ್ಲಾಮ್ ವಿವಾದ ಹಿನ್ನಲೆಯಲ್ಲಿ ಪ್ರಸಕ್ತ ವರ್ಷ ಚೀನಾ ನದಿಗೆ ಸಂಬಂಧಿಸಿದ ಯಾವುದೇ ವರದಿಗಳನ್ನು ಭಾರತದೊಂದಿಗೆ ಹಂಚಿಕೊಂಡಿಲ್ಲ ಎಂದು ಶುಕ್ರವಾರವಷ್ಟೇ ಭಾರತ ಹೇಳಿತ್ತು.

ವಿವಾದ ಬೆನ್ನಲ್ಲೇ ಲಡಾಖ್'ಗೆ ನೂತನ ರಾಷ್ಟ್ರಪತಿ ಕೋವಿಂದ್ ಭೇಟಿ ಸಾಧ್ಯತೆ
ಡೋಕ್ಲಾಮ್ ವಿವಾದ ಭಾರತ ಹಾಗೂ ಚೀನಾ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಿರುವ ಬೆನ್ನಲ್ಲೇ ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಲಡಾಖ್ ಗೆ ಶೀಘ್ರದಲ್ಲಿಯೇ ಭೇಟಿ ನೀಡಲಿದ್ದಾರೆಂದು ಹೇಳಲಾಗುತ್ತಿದೆ. 

ಕೋವಿಂದ್ ಅವರು ಭೇಟಿ ನೀಡುವುದಕ್ಕೂ ಮುನ್ನ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಮೂರು ದಿನಗಳ ಕಾಲ ಲಡಾಖ್'ಗೆ ಭೇಟಿ ನೀಡಿದ್ದು, ಪರಿಸ್ಥಿತಿ ಅವಲೋಕಿಸಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.  

ಬ್ರಹ್ಮಪುತ್ರ ಏಷ್ಯಾದ ಪ್ರಮುಖ ನದಿಗಳಲ್ಲಿ ಒಂದು. ನೈಋತ್ಯ ಟಿಬೆಟ್ ನ ಮಾನಸ ಸರೋವರದ ಬಳಿ ಉಗಮಿಸುವ ಈ ನದಿ ಅಲ್ಲಿ ಟ್ಸಾಂಗೋ ಎಂಬ ಹೆಸರಿನಲ್ಲಿ ಕರೆಸಿಕೊಳ್ಳುತ್ತದೆ. ಮುಂದೆ ದಕ್ಷಿಣ ಟಿಬೆಟ್ ನಲ್ಲಿ ಹರಿಯುವಾಗ ಡಿಹಾಂಗ್ ಎಂದು ಕರೆಸಿಕೊಳ್ಳುತ್ತದೆ. ಆ ನಂತರ ಹಿಮಾಲಯವನ್ನು ದಾಟಿ ಭಾರತದ ಅರುಣಾಚಲ ಪ್ರದೇಶದಲ್ಲಿ ಭಾರತವನ್ನು ಪ್ರವೇಶ ಮಾಡುತ್ತದೆ. ಭಾರತದಲ್ಲಿ ಇದರ ಹೆಸರು ಬ್ರಹ್ಮಪುತ್ರ. ಭಾರತದ ಮೂಲಕ ಹಾದು ಬಾಂಗ್ಲಾದೇಶದಲ್ಲಿ ಸಮುದ್ರ ಸೇರುವ ಈ ಬ್ರಹ್ಮಪುತ್ರ ನದಿ ಮೇಲೆ ಚೀನಾದ ಕಣ್ಣು ಹಾಕಿದೆ. 

ಸ್ವಾಯತ್ತ ಪ್ರದೇಶವಾಗಿರುವ ಟಿಬೆಟ್ ನಲ್ಲಿ ತನ್ನ ಪಾರುಪತ್ಯ ಸಾಧಿಸಿರುವ ಚೀನಾ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಬೃಹತ್ ಅಣೆಕಟ್ಟು ನಿರ್ಮಿಸುವ ಮೂಲಕ ವಿದ್ಯುತ್ ಉತ್ಪಾದನೆ ಆರಂಭಿಸಿದೆ. ಇದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದೆ. ಆದರೆ, ಹಂಚಿಕೆಗೆ ಯಾವುದೇ ಒಪ್ಪಂದವಿಲ್ಲ. ಟಿಬೆಟ್ ಭಾಗದಲ್ಲಿರುವ ಬ್ರಹ್ಮಪುತ್ರದ ನೀರಿನ ಮಟ್ಟದ ಬಗ್ಗೆಯೀ ಚೀನಾ ಮಾಹಿತಿಯನ್ನು ಬಹಿರಂಗಪಡಿಸುತ್ತಿಲ್ಲ. ಹೀಗಾಗಿ ಅರುಣಾಚಲ ಪ್ರದೇಶಮತ್ತು ಅಸ್ಸಾಂನ ವಿಸ್ತಾರ ಪ್ರದೇಶಗಳು ಹಠಾತ್ ಆಗಿ ಪ್ರವಾಹ ಭೀತಿಯಲ್ಲಿಯೇ ಇರುತ್ತವೆ. ಪ್ರವಾಹ ಸಮಸ್ಯೆ ಪರಿಹಾರಕ್ಕಾಗಿಯೇ ಸುಮಾರು 25 ಅಣೆಕಟ್ಟೆಗಳನ್ನು ನಿರ್ಮಿಸುವ ಯೋಜನೆಯನ್ನು ಭಾರತ ರೂಪಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com