

ಫೋರ್ಟ್ ಲಾಡರ್'ಡೇಲ್: ಅಮೇರಿಕದ ಫ್ಲೋರಿಡಾ ರಾಜ್ಯದ ಫೋರ್ಟ್ ಲಾಡರ್'ಡೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಮನಬಂದಂತೆ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಐವರು ಸಾವನ್ನಪ್ಪಿ 8 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಗುಂಡಿನ ದಾಳಿ ನಡೆಸಿದ ಶಂಕಿತ ವ್ಯಕ್ತಿಯನ್ನು ಇಸ್ಟಬನ್ ಸ್ಯಾಂಟಿಗೊ (26) ಎಂದು ಗುರ್ತಿಸಲಾಗಿದೆ. ಸ್ಟಾರ್ ವಾರ್ಸ್ ಟಿ-ಶರ್ಟ್ ಧರಿಸಿದ್ದ ಈತ ಟರ್ಮಿನಲ್ 2 ರಲ್ಲಿ ಬ್ಯಾಗೇಜ್ ಪಡೆಯುವ ಪ್ರದೇಶದಲ್ಲಿರುವ ಚೆಕ್ ಪೋಸ್ಟ್ ಬಳಿ ಗುಂಡಿನ ದಾಳಿ ನಡೆಸಿದ್ದಾರೆ.
ಗುಂಡಿನ ದಾಳಿ ನಡೆಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ವಿಮಾನ ನಿಲ್ದಾಣದಲ್ಲಿನ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಬಂಧಿತ ವ್ಯಕ್ತಿ ಇರಾಕ್ ಭದ್ರತಾ ಪಡೆಯೊಂದಿಗೆ ಕೆಲಸ ಮಾಡುತ್ತಿದ್ದ. ಆದರೆ, ಕೆಲಸದಲ್ಲಿ ಅತೃಪ್ತಿ ಕಂಡು ಬಂದ ಹಿನ್ನಲೆಯಲ್ಲಿ ಈತನನ್ನು ಅಲ್ಲಿನ ಅಧಿಕಾರಿಗಳು ಹುದ್ದೆಯಿಂದ ಕಿತ್ತುಹಾಕಿದ್ದರು. ಗುಂಡಿನ ದಾಳಿ ನಡೆಸಿದ ಬಳಿಕ ಸ್ಥಳದಲ್ಲಿದ್ದ ಭದ್ರತಾಧಿಕಾಗಳು ಈತನನ್ನು ಬಂಧನಕ್ಕೊಳಪಡಿಸಿದ್ದಾರೆ. ದಾಳಿಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಪ್ರಸ್ತುತ ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆ ಬಳಿಕವಷ್ಟೇ ಸತ್ಯಾಂಶ ಹೊರಬರಬೇಕಿದೆ.
ಇಸ್ಟಬನ್ ಸ್ಯಾಂಟಿಗೊ ಸಹೋದರ ಆತನ ಬಗ್ಗೆ ಹೇಳಿಕೊಂಡಿದ್ದು, ನನ್ನ ತಮ್ಮ ಮಾನಸಿಕ ರೋಗದಿಂದ ಬಳಲುತ್ತಿದ್ದು, ಮಾನಸಿಕ ರೋಗ ತಜ್ಞರ ಬಳಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಎಂದು ಹೇಳಿದ್ದಾರೆ.