ಬ್ರಿಕ್ಸ್ ಎನ್ಎಸ್ಎ ಸಭೆ: ಬೀಜಿಂಗ್ ತಲುಪಿದ ಅಜಿತ್ ದೋವಲ್

ಸಿಕ್ಕಿ ಗಡಿಯಲ್ಲಿನ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆ ಕಳೆದೆರಡು ತಿಂಗಳಿಂದ ಮುಖಾಮುಖಿಯಾಗಿ ಉದ್ವಿಗ್ನತೆಗೆ ಕಾರಣವಾಗಿರುವ ನಡುವೆಯೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು...
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್  (ಸಂಗ್ರಹ ಚಿತ್ರ)
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (ಸಂಗ್ರಹ ಚಿತ್ರ)
Updated on
ಬೀಜಿಂಗ್: ಸಿಕ್ಕಿ ಗಡಿಯಲ್ಲಿನ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆ ಕಳೆದೆರಡು ತಿಂಗಳಿಂದ ಮುಖಾಮುಖಿಯಾಗಿ ಉದ್ವಿಗ್ನತೆಗೆ ಕಾರಣವಾಗಿರುವ ನಡುವೆಯೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಬ್ರಿಕ್ಸ್ ಎನ್ಎಸ್ಎ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಬೀಜಿಂಗ್'ಗೆ ತಲುಪಿದ್ದಾರೆ. 
ಬ್ರಿಕ್ಸ್ ದೇಶಗಳ ಭದ್ರತಾ ವಿಷಯಗಳಿಗೆ ಸಂಬಂಧಿಸಿದಂತೆ ಎನ್ಎಸ್ಎ ಸಮೂಹವು ಚೀನಾದ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಿದ್ದು, ಈ ವೇಲೆ ದೋವಲ್ ಅವರು ಉಭಯ ರಾಷ್ಟ್ರಗಳ ವೈಮನಸ್ಸಿಗೆ ಕಾರಣವಾಗಿರುವ ಡೋಕ್ಲಾಮ್ ಬಿಕ್ಕಟ್ಟಿನ ಕುರಿತಾಗಿ ಚರ್ಚೆ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ.
ಚೀನಾ ಬ್ರಿಕ್ಸ್ ಅಧ್ಯಕ್ಷತೆಯನ್ನು ಹೊಂದಿದ್ದು 2017ರ ಬ್ರಿಕ್ಸ್ ಶೃಂಗಸಭೆಯನ್ನು ಕ್ಸಿಯಾಮನ್ ನಗರದಲ್ಲಿ ನಡೆಸಿಕೊಡಲಿದೆ. 
ಭಾರತ, ಚೀನಾ, ಭೂತಾನ್ ಗಡಿಗಳ ಸಂಗಮದಂತಹ ಸ್ಥಳದಲ್ಲಿ ಡೋಕ್ಲಾಮ್ ಇದ್ದು, ಅದು ತನಗೇ ಸೇರಿದ್ದು ಎಂದು ಚೀನಾ ವಾದಿಸುತ್ತಿರುವುದರಿಂದ ವಿವಾದ ಭುಗಿಲೆದ್ದಿದೆ. 
ವಿವಾದ ಸಂಬಂಧ ಹಲವು ದಿನಗಳಿಂದಲೂ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದೆ.  ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ಈ ಹಿಂದೆ ನಾಶ ಮಾಡಿದ್ದರು. ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿತ್ತು. ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. ಜೂನ್‌ 6 ಘಟನೆ ಬಳಿಕ ಇಂಡೋ-ಚೀನಾ ಗಡಿ ಪ್ರಕ್ಷುಬ್ದಗೊಂಡಿದೆ
ಗಡಿ ಪ್ರಕ್ಷುಬ್ಧಗೊಂಡ ಬಳಿಕ ಚೀನಾ ಸರ್ಕಾರದ ಅಧೀನದಲ್ಲಿರುವ ವಿವಿಧ ಮಾಧ್ಯಮಗಳು ನಿರಂತರವಾಗಿ ಭಾರತವನ್ನು ಬೆದರಿಸುವ ಹಾಗೂ ಕೆರಳಿಸುವ ಕೆಲಗಳನ್ನು ಮಾಡುತ್ತಲೇ ಇವೆ. ಚೀನಾದ ಪತ್ರಿಕೆಯೊಂದು 1962ರ ಸೋಲನ್ನು ನೆನಪಿಸಿದಾಗ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಇದಕ್ಕೆ ತಕ್ಕ ತಿರುಗೇಟನ್ನೇ ನೀಡಿದ್ದರು. ಇದಾದ ಬಳಿಕ ಚೀನಾದ ಮಾಧ್ಯಮ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಂಸತ್ತಿಗೆ ಸುಳ್ಳು ಹೇಳುತ್ತಿದ್ದಾರೆಂದು ಆರೋಪ ಮಾಡಿತ್ತು. 
ಮತ್ತೊಂದು ಮಾಧ್ಯಮ ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾದ ಬಳಿಕ ಹುಟ್ಟಿಕೊಂಡ ಹಿಂದೂ ರಾಷ್ಟ್ರೀಯವಾದವೇ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಹೇಳುವ ಮೂಲಕ ವಿವಾದಕ್ಕೆ ಭಾರತದ ರಾಜಕೀಯ ಒಡಕಿನ ಆಯಾಮ ನೀಡುವ ಪ್ರಯತ್ನವನ್ನು ಮಾಡಿತ್ತು. ಇದಾದ ಬಳಿಕ ಪರ್ವತವನ್ನಾದರೂ ಅಲುಗಾಡಿಸಬಹುದು ಆದರೆ, ನಮ್ಮ ಸೇನೆಯ ಕೂದಲು ಕೊಂಕಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಮತ್ತೊಂದು ಪತ್ರಿಕೆ ಚೀನಾ ವಿರುದ್ಧ ಯುದ್ಧ ಮಾಡಿ ಗೆಲ್ಲುವ ಭ್ರಮೆಯಲ್ಲಿ ಭಾರತವಿದ್ದು, ತನ್ನ ಭ್ರಮೆಯಿಂದ ಭಾರತ ಹೊರಬರಬೇಕಿದೆ ಎಂದು ವ್ಯಂಗ್ಯ ಲೇಖನ ಪ್ರಕಟ ಮಾಡಿತ್ತು. 
ಚೀನಾದ ಸರ್ಕಾರಿ ಮಾಧ್ಯಮಗಳೇ ಯುದ್ಧೋನ್ಮಾದದ ಮಾತುಗಳನ್ನಾಡುತ್ತಾ ಆ ದೇಶದ ವಿದೇಶಾಂಗ ನೀತಿಗಳನ್ನು ನಿರ್ಧರಿಸತೊಡಗಿವೆ. ಆದರೆ, ಭಾರತ ಮಾತ್ರ ಈ ವಿಚಾರದಲ್ಲಿ ಉತ್ತಮವಾದ ಸಂಯಮವನ್ನು ತೋರಿಸುತ್ತಿದೆ. ಪ್ರಚೋದಿಸುತ್ತಿರುವ ಚೀನಾಕ್ಕೆ ಅಗತ್ಯವಿರುವಷ್ಟಕ್ಕೆ ಮಾತ್ರ ಪ್ರತಿಕ್ರಿಯೆ ನೀಡಿ ಉಳಿದದ್ದರ ಬಗ್ಗೆ ನಿರ್ಲಕ್ಷ್ಯ ತೋರಿಸಿ, ಬೆದರಿಕೆಗಳಿಗೆ ಹೆದರುವುದಿಲ್ಲ ಎಂದ ಸಂದೇಶವನ್ನು ಸಾರಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com