ಢಾಕಾ: ಭಾರಿ ಮಳೆಯಿಂದಾಗಿ ಆಗ್ನೇಯ ಬಾಂಗ್ಲಾದೇಶದಲ್ಲಿ ಭೂ ಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 35 ಮಂದಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
ಭೂ ಕುಸಿತ ಸಂಭವಿಸಿದ ಕುಗ್ರಾಮಕ್ಕೆ ರಕ್ಷಣಾ ಸಿಬ್ಬಂದಿ ತಲುಪಿದ್ದಾರೆ. ಆದರೆ ದೂರವಾಣಿ ಮತ್ತು ಸಾರಿಗೆ ಸಂಪರ್ಕ ಕಡಿತಗೊಂಡಿದ್ದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ರಕ್ಷಣಾ ಕಾರ್ಯ ಬರದಿಂದ ಸಾಗುತ್ತಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿ ರಿಯಾಜ್ ಅಹ್ಮದ್ ಅವರು ಎಎಫ್ ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ರಂಗಮತಿ ಮತ್ತು ಬಂದರ್ಬನ್ ಜಿಲ್ಲೆಗಳಲ್ಲಿ ಸೋಮವಾರ ಬೆಳಗ್ಗೆಯಿಂದ ನಿರಂತರವಾಗಿ ಮಾನ್ಸೂನ್ ಮಳೆ ಸುರಿಯುತ್ತಿದ್ದು, ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ಥವ್ಯಸ್ಥವಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಂಗಮತಿ ಜಿಲ್ಲೆಯಲ್ಲಿ 343 ಮಿಲಿಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿ ಬಝ್ಲುರ್ ರಶಿದ್ ಅವರು ಹೇಳಿದ್ದಾರೆ.