ಅಮೆರಿಕದ ನ್ಯೂಯಾರ್ಕ್ ನಲ್ಲಿ ಆಯೋಜನೆಯಾಗಿರುವ ವಿಶ್ವಸಂಸ್ಥೆ ಸಾಮಾನ್ಯಸಭೆಯಲ್ಲಿ ಪಾಲ್ಗೊಂಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಟಿಲ್ಲರ್ಸನ್ ಹಾಗೂ ಜಪಾನ್ ವಿದೇಶಾಂಗ ಸಚಿವ ಟಾರೋ ಕೋನೋ ಅವರನ್ನು ಭೇಟಿ ಮಾಡಿ ಮೂರು ದೇಶಗಳ ತ್ರಿಪಕ್ಷೀಯ ಸಭೆ ನಡೆಸಿದರು. ಈ ವೇಳೆ ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆ ವಿರುದ್ಧ ಕಿಡಿಕಾರಿದ ಸುಷ್ಮಾ ಸ್ವರಾಜ್ ಅವರು ಉತ್ತರ ಕೊರಿಯಾದೊಂದಿಗೆ ಅಣ್ವಸ್ತ್ರ ಸಂಪರ್ಕ ಹೊಂದಿರುವ ರಾಷ್ಟ್ರಗಳೇ ಈಗಿನ ಪರಿಸ್ಥಿತಿ ಹೊಣೆಗಾರರು ಎಂದು ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ. ಅಂತೆಯೇ ಉತ್ತರ ಕೊರಿಯಾ ಮತ್ತು ಅದರೊಂದಿಗೆ ಸಂಬಂಧ ಹೊಂದಿರುವ ರಾಷ್ಟ್ರಗಳ ನಡುವಿನ ಅಣ್ವಸ್ತ್ರ ಸಂಪರ್ಕ ಕುರಿತು ತನಿಖೆ ನಡೆಸುವಂತೆ ಸುಷ್ಮಾ ಆಗ್ರಹಿಸಿದ್ದಾರೆ.
ಈ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಪ್ರಸ್ತುತ ನಾವು ಎಲ್ಲ ಬಗೆಯ ವಿವರವನ್ನೂ ನೀಡಿದ್ದೇವೆ. ಯಾವ ದೇಶದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಆ ದೇಶದ ಹೆಸರು ಹೇಳುವ ಅಗತ್ಯವಿಲ್ಲ. ಅಂತೆಯೇ ಉತ್ತರ ಕೊರಿಯಾದ ಅಣ್ವಸ್ತ್ರಯೋಜನೆ ಕುರಿತಂತೆ ಹಾಗೂ ಆ ದೇಶಕ್ಕೆ ನೆರವು ನೀಡುತ್ತಿರುವ ದೇಶಗಳ ವಿರುದ್ಧ ವಿಶ್ವಸಮುದಾಯ ಕಠಿಣ ನಿರ್ಧಾರ ತಳೆಯುವ ಅಗತ್ಯವಿದೆ ಎಂದು ರವೀಶ್ ಕುಮಾರ್ ಹೇಳಿದರು.
ಇದಲ್ಲದೆ ತ್ರಿಪಕ್ಷೀಯ ಸಭೆಯಲ್ಲಿ ಮೂರು ದೇಶಗಳು ಕಡಲ ಭದ್ರತೆ ಮತ್ತು ಸಂಪರ್ಕದ ಕುರಿತು ಚರ್ಚೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರಕ್ಷಣಾ ಸಂಬಂಧ ಹೊಂದುವ ಕುರಿತು ಚರ್ಚಿಸಲಾಯಿತು ಎಂದು ರವೀಶ್ ಕುಮಾರ್ ಮಾಹಿತಿ ನೀಡಿದರು.