ವಾಷಿಂಗ್ಟನ್: ಅಮೆರಿಕವನ್ನು ಅದರ ದಕ್ಷಿಣ ಗಡಿಯ ಮೂಲಕ ಅಕ್ರಮವಾಗಿ ಪ್ರವೇಶಿಸಿರುವ, ಪಂಜಾಬಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ, ಸುಮಾರು 100 ಭಾರತೀಯರನ್ನು ಬಂಧಿಸಿ, ಎರಡು ಅಕ್ರಮ ವಲಸೆ ಬಂಧನ ಕೇಂದ್ರದಲ್ಲಿರಿಸಲಾಗಿದೆ.
ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಆ ಎರಡು ವಲಸೆ ಬಂಧನ ಕೇಂದ್ರಗಳ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ.
ಸುಮಾರು 40 ರಿಂದ 45 ಭಾರತೀಯರು ದಕ್ಷಿಣ ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿನ ಒಕ್ಕೂಟ ಬಂಧನ ಕೇಂದ್ರದಲ್ಲಿದ್ದಾರೆ. ಇನ್ನೂ 52 ಭಾರತೀಯರು, ಇವರಲ್ಲಿ ಹೆಚ್ಚಿನವರು ಸಿಕ್ಖರು ಮತ್ತು ಕ್ರೈಸ್ತರು, ಒರೆಗಾನ್ ವಲಸೆ ಬಂಧನ ಕೇಂದ್ರದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಈಗಾಗಲೇ ಒರೆಗಾನ್ ವಲಸೆ ಬಂಧನ ಕೇಂದ್ರಕ್ಕೆ ಭೇಟಿ ನೀಡಿದ್ದು, ಮತ್ತೊಬ್ಬ ಅಧಿಕಾರಿ ನ್ಯೂ ಮೆಕ್ಸಿಕೋ ಕೇಂದ್ರಕ್ಕೆ ಶೀಘ್ರದಲ್ಲೇ ಭೇಟಿ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.