ಘೋಷಿತ ಉಗ್ರರ ಪಟ್ಟಿಗೆ ಮಸೂದ್, ಹಫೀಜ್ ಸೇರ್ಪಡೆ: ಭಾರತದ ದಿಟ್ಟ ಕ್ರಮಕ್ಕೆ ಅಮೆರಿಕಾ ಪ್ರಶಂಸೆ

ಘೋಷಿತ ಉಗ್ರರ ಪಟ್ಟಿಗೆ ಪಾಕಿಸ್ತಾನದ ಭಯಂಕರ ಉಗ್ರರಾದ ಅಜರ್ ಮೆಹಮೂದ್, ಹಫೀಜ್ ಮೊಹಮ್ಮದ್ ಸಯೀದ್, ಝಾಕಿರ್ ಉರ್ ರೆಹ್ಮಾನ್ ಲಖ್ವಿ, ದಾವೂದ್ ಇಬ್ರಾಹಿಂನನ್ನು ಸೇರ್ಪಡೆಗೊಳಿಸಿರುವ ಭಾರತದ ದಿಟ್ಟ ಕ್ರಮಕ್ಕೆ ಅಮೆರಿಕಾ ಗುರುವಾರ ಪ್ರಶಂಸೆ ವ್ಯಕ್ತಪಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಘೋಷಿತ ಉಗ್ರರ ಪಟ್ಟಿಗೆ ಪಾಕಿಸ್ತಾನದ ಭಯಂಕರ ಉಗ್ರರಾದ ಅಜರ್ ಮೆಹಮೂದ್, ಹಫೀಜ್ ಮೊಹಮ್ಮದ್ ಸಯೀದ್, ಝಾಕಿರ್ ಉರ್ ರೆಹ್ಮಾನ್ ಲಖ್ವಿ, ದಾವೂದ್ ಇಬ್ರಾಹಿಂನನ್ನು ಸೇರ್ಪಡೆಗೊಳಿಸಿರುವ ಭಾರತದ ದಿಟ್ಟ ಕ್ರಮಕ್ಕೆ ಅಮೆರಿಕಾ ಗುರುವಾರ ಪ್ರಶಂಸೆ ವ್ಯಕ್ತಪಡಿಸಿದೆ. 

ಭಾರತದ ದಿಟ್ಟ ಕ್ರಮದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾದ ದಕ್ಷಿಣ ಮತ್ತು ಕೇಂದ್ರೀಯ ಏಷ್ಯಾ ಭಾಗದ ಪ್ರಧಾನ ಸಹಾಯಕ ಕಾರ್ಯದರ್ಶಿ ಆಲಿಸ್ ಜಿ.ವೆಲ್ಸ್ ಅವರು, ಭಾರತದ ನೂತನ ಭಯೋತ್ಪಾದನಾ ತಡೆ ಕಾಯ್ದೆ ಹಾಗೂ ಪಟ್ಟಿಯಲ್ಲಿ ನಾಲ್ವರು ಉಗ್ರರ ಸೇರ್ಪಡೆಗೊಳಿಸಿರುವುದನ್ನು ಅಮೆರಿಕಾ ಬೆಂಬಲಿಸುತ್ತದೆ ಹಾಗೂ ಅದನ್ನು ಪ್ರಶಂಸಿಸುತ್ತದೆ. ಭಾರತದ ಈ ಹೊಸ ಕಾನೂನು ಉಗ್ರರನ್ನು ಮಟ್ಟಹಾಕಲು ಭಾರತ ಹಾಗೂ ಅಮೆರಿಕಾ ನಡೆಸುತ್ತಿರುವ ಜಂಟಿ ಕಾರ್ಯಾಚರಣೆಗೆ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ. 

ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಅಜರ್ ಮೆಹಮೂದ್, ಜಮಾದ್-ಉದ್-ದವಾ ಸಂಸ್ಥಾಪಕ ಹಫೀಜ್ ಮೊಹಮ್ಮದ್ ಸಯೀದ್, ಲಷ್ಕರ್ ಕಮಾಂಡರ್ ಝಾಕಿರ್-ಉರ್-ರೆಹ್ಮಾನ್ ಲಖ್ವಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ನೂತನ ಭಯೋತ್ಪಾದನಾ ತಡೆ ಕಾಯ್ದೆ ಅನ್ವಯ ವ್ಯಕ್ತಿಗತ ಉಗ್ರರು ಎಂದು ಕೇಂದ್ರ ಸರ್ಕಾರ ನಿನ್ನೆಯಷ್ಟೇ ಘೋಷಣೆ ಮಾಡಿತ್ತು. 

ಕಳೆದ ತಿಂಗಳು ಸಂಸತ್ತಿನಲ್ಲಿ ಅನುಮೋದನೆಗೊಂಡ ಕಾನೂನು ಬಾಹಿರ ಚಟುವಟಿಕೆಗಳ ತಿದ್ದುಪಡಿ ಕಾಯ್ದೆಯನ್ವಯ ಕೇಂದ್ರ ಗೃಹ ಇಲಾಖೆ ಮೊದಲ ಬಾರಿಗೆ ವ್ಯಕ್ತಿಗತ ಉಗ್ರರ ಪಟ್ಟಿಯನ್ನು ಘೋಷಣೆ ಮಾಡಿದೆ. ಈ ಹಿಂದಿನ ಯುಎಪಿಎ ಕಾಯ್ದೆಯ ಅನ್ವಯ ಗುಂಪನ್ನು ಮಾತ್ರವೇ ಉಗ್ರ ಸಂಘಟನೆ ಎಂದು ಘೋಷಿಸಬಹುದಿತ್ತು. ಆದರೆ, ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಇದೀಗ ಒಬ್ಬ ವ್ಯಕ್ತಿಯನ್ನು ಕೂಡಾ ಉಗ್ರ ಎಂದು ಪರಿಗಣಿಸಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com