

ಲಂಡನ್; ಚೀನಾದಲ್ಲಿ ಹುಟ್ಟಿ ವಿಶ್ವದ 200ಕ್ಕೂ ಹೆಚ್ಚು ದೇಶಗಳನ್ನು ವ್ಯಾಪಿಸಿ ಸಾವಿನ ಬಲೆಯನ್ನೇ ಬೀಸಿರುವ ಮಹಾಮಾರಿ ಕೊರೋನಾ ವೈರಸ್ ಸೋಂಕು ದಿನೇ ದಿನೇ ಆದೆಷ್ಟು ವೇಗದಲ್ಲಿ ಹರಡುತ್ತಿದೆ ಎಂಬುದಕ್ಕೆ ಇದೀಗ ಮತ್ತೊಂದು ಉದಾಹರಣೆ ಲಭಿಸಿದೆ.
ಗುರುವಾರದ ಹೊತ್ತಿಗೆ ವಿಶ್ವದಾದ್ಯಂತ 21 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ವ್ಯಾಪಿಸಿದೆ. ಈ ಪೈಕಿ ಮೊದಲ ಪ್ರಕರಣ ದಾಖಲಾಗಿದಾಗಿನಿಂದ ಸೋಂಕಿತರ ಸಂಖ್ಯೆ 10 ಲಕ್ಷಕ್ಕೆ ತಲುಪಲು 93 ದಿನಗಲನ್ನು ತೆಗೆದುಕೊಂಡಿದ್ದರೆ, ನಂತರದ 10 ಲಕ್ಷದ ಗಡಿದಾಟಲು ಕೇವಲ 13 ದಿನಗಳನ್ನು ತೆಗೆದುಕೊಂಡಿದೆ.
ವಿಶ್ವದಾದ್ಯಂತ ಇರುವ ಒಟ್ಟು 21 ಲಕ್ಷ ಸೋಂಕಿತರ ಪೈಕಿ ಅಮೆರಿಕಾ ಮತ್ತು ಐರೋಪ್ಯ ದೇಶಗಳ ಪಾಲು ಶೇ.80ರಷ್ಟಿದೆ. ಅಂದರೆ, 13ಲಕ್ಷಕ್ಕೂ ಹೆಚ್ಚು ಜನ ಈ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ.
ವಿಶ್ವದೆಲ್ಲೆಡೆ 2,153,620 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, 143,844 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರಲ್ಲಿ ಅಮೆರಿಕಾ ಪ್ರಜೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೊಳಗಾಗಿದ್ದಾರೆ. ಅಮೆರಿಕಾದಲ್ಲಿ 667,801, ಸ್ಪೇನ್ 184,948, ಇಟಲಿ 168,941, ಜರ್ಮನಿ 137,698, ಫ್ರಾನ್ಸ್ 147,091 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಇನ್ನು ಸಾವಿನ ಸಂಖ್ಯೆಗೆ ಬಂದರೆ, ಇಟಲಿಯಲ್ಲಿ 22,170, ಸ್ಪೇನ್ ನಲ್ಲಿ 19,315, ಫ್ರಾನ್ಸ್ ನಲ್ಲಿ 17,941, ಯುಕೆಯಲ್ಲಿ 13,759 ಮಂದಿ ಬಲಿಯಾಗಿದ್ದಾರೆ.