ಅಮೆರಿಕಾದಲ್ಲಿ ಕೊರೋನಾ ಅಬ್ಬರ: ಮಹಾಮಾರಿ ವೈರಸ್ ಗೆ ಒಟ್ಟು 2.50 ಲಕ್ಷಕ್ಕೂ ಹೆಚ್ಚು ಮಂದಿ ಸಾವು

ಅಮೆರಿಕಾದಲ್ಲಿ ಕೊರೋನಾ ಎಡೆಬಿಡದೆ ಕಾಡುತ್ತಿದ್ದು, ಈ ವರೆಗೂ ರಾಷ್ಟ್ರದಲ್ಲಿ ಮಹಾಮಾರಿ ಕೊರೋನಾ ವೈರಸ್'ಗೆ 2.50,000 ಮಂದಿ ಬಲಿಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಅಮೆರಿಕಾದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿ ಮೃತಪಟ್ಟವರ ಸಂಖ್ಯೆ 2.5 ಲಕ್ಷ ಗಡಿ ದಾಟಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ ಅಂಶಗಳ ಪ್ರಕಾರ ಬುಧವಾರದ ವರೆಗೆ ಅಮೆರಿಕಾದಲ್ಲಿ ಕೊರೊನಾ ಸೋಂಕಿನಿಂದ 2 ಲಕ್ಷ 50,029 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ಅಮೆರಿಕಾದಲ್ಲಿ ಈವರೆಗೆ ಒಟ್ಟು 1 ಕೋಟಿ 15 ಲಕ್ಷದ 17,455 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕೊರೊನಾ ಸಾಂಕ್ರಾಮಿಕ ಅಮೆರಿಕಾವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಪ್ರತಿದಿನ ಒಂದೂವರೆ ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು, ಸಾವಿರಕ್ಕೂ ಹೆಚ್ಚು ಸಾವುಗಳು ದಾಖಲಾಗುತ್ತಿವೆ. ಚಳಿಗಾಲ ಸಮೀಪಿಸುತ್ತಿರುವಂತೆ ಸಾಂಕ್ರಾಮಿಕ ಮತ್ತಷ್ಟು ವ್ಯಾಪಿಸುತ್ತಿದೆ.

ಟ್ರಂಪ್ ಆಡಳಿತ ಮಾತ್ರ ಕೊರೊನಾ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೊರೊನಾ ಪ್ರಸರಣ ತೀವ್ರ ಗೊಳ್ಳುತ್ತಿರುವಂತೆ ನ್ಯೂಯಾರ್ಕ್ ನಗರದಲ್ಲಿ ಶಾಲೆಗಳನ್ನು ಮತ್ತೆ ಮುಚ್ಚಲಾಗಿದೆ. ಬಾರ್ ಹಾಗೂ ರೆಸ್ಟೋರೆಂಟ್‌ ಗಳ ಮೇಲೆ ಮತ್ತೆ ನಿರ್ಬಂಧ ವಿಧಿಸಲಾಗಿದೆ. 

ಮತ್ತೊಂದೆಡೆ ಕೊರೊನಾ ವ್ಯಾಪಕವಾಗಿ ಮತ್ತೆ ಹರಡುತ್ತಿದ್ದರೂ ಹೆಚ್ಚಿನ ರಾಜ್ಯಗಳಲ್ಲಿ ಜನರು ಕನಿಷ್ಠ ಮಾಸ್ಕ್ ಸಹ ಧರಿಸುತ್ತಿಲ್ಲ. ನಿಯೋಜಿತ ಅಮೆರಿಕಾ ಅಧ್ಯಕ್ಷ ಜೋ ಬಿಡನ್, ಜನರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ವಿಶ್ವಾದ್ಯಂತ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಹಾಗೂ ಸಾವುಗಳು ಅಮೆರಿಕಾದಲ್ಲಿ ವರದಿಯಾಗಿದೆ. ಅಮೆರಿಕಾ ನಂತರ ಬ್ರೆಜಿಲ್ (1,66,699), ಭಾರತ (1,30,993) ಮತ್ತು ಮೆಕ್ಸಿಕೊ (99,026) ಅತಿ ಹೆಚ್ಚು ಸಾವುಗಳು ಸಂಭವಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com