ಗಡಿ ಜಟಾಪಟಿ ನಡುವೆ ಟಿಬೆಟ್'ನಲ್ಲಿ ಬ್ರಹ್ಮಪುತ್ರ ನದಿಗೆ ಬೃಹತ್ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಮುಂದು!

ಸಿಕ್ಕಿಂ ಗಡಿಯಲ್ಲಿ ಬರುವ ಡೋಕ್ಲಾಮ್ ಗಡಿ ವಿವಾದ ಆರಂಭವಾದಾಗಿನಿಂದಲೂ ಭಾರತದ ವಿರುದ್ಧ ಒಂದಲ್ಲ ಒಂದು ರೀತಿ ಕತ್ತಿ ಮಸೆಯುತ್ತಿರುವ ಚೀನಾ, ಟಿಬೆಟ್'ನಲ್ಲಿ ಬ್ರಹ್ಮಪುತ್ರ ನದಿಗೆ ಬೃಹತ್ ಜಲವಿದ್ಯುತ್ ಯೋಜನೆ ನಿರ್ಮಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಸಿಕ್ಕಿಂ ಗಡಿಯಲ್ಲಿ ಬರುವ ಡೋಕ್ಲಾಮ್ ಗಡಿ ವಿವಾದ ಆರಂಭವಾದಾಗಿನಿಂದಲೂ ಭಾರತದ ವಿರುದ್ಧ ಒಂದಲ್ಲ ಒಂದು ರೀತಿ ಕತ್ತಿ ಮಸೆಯುತ್ತಿರುವ ಚೀನಾ, ಟಿಬೆಟ್'ನಲ್ಲಿ ಬ್ರಹ್ಮಪುತ್ರ ನದಿಗೆ ಬೃಹತ್ ಜಲವಿದ್ಯುತ್ ಯೋಜನೆ ನಿರ್ಮಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. 

ಚೀನಾದ 14ನೇ ಪಂಚವಾರ್ಷಿಕ ಯೋಜನೆಯ ಭಾಗವಾಗಿ ಈ ಪ್ರಸ್ತಾವನ್ನು ಮುಂದುರಿಸಲಾಗಿದ್ದು, ಮುಂದಿನ ವರ್ಷ ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ. 

ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಟಿಬೆಟ್'ನಲ್ಲಿ ಚೀನಾ ಬೃಹತ್ ಅಣೆಕಟ್ಟು ನಿರ್ಮಿಸಲಿದೆ ಎಂದು ವರದಿಗಳು ತಿಳಿಸಿವೆ. ಯರ್ಲುಂಗ್ ಝಾಂಗ್ಬೊ ನದಿಯ (ಬ್ರಹ್ಮಪುತ್ರ ನದಿಗೆ ಟಿಬೆಟಿಯನ್ ಹೆಸರು) ಕೆಳಹರಿವಿನ ಪ್ರದೇಶವನ್ನು ಜಲವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲು ಚೀನಾ ನಿರ್ಧರಿಸಿದೆ ಎಂದು ಚೀನಾದ ವಿದ್ಯುತ್ ಯೋಜನೆ ನಿರ್ಮಾಣ ಸಂಸ್ಧೆಯ ಅಧ್ಯಕ್ಷ ಯಾನ್ ಝೀಯಾಂಗ್ ಹೇಳಿದ್ದಾರೆ. 

ಈ ಯೋಜನೆಯು ಜಲ ಸಂಪನ್ಮೂಲ ನಿರ್ವಹಣೆ ಮತ್ತು ಆಂತರಿಕ ಭದ್ರತೆಗೆ ನೆರವಾಗಲಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. 

ದೇಶದ 14ನೇ ಪಂಚವಾರ್ಷಿಕ ಯೋಜನೆಯ (2021-2025) ಭಾಗವಾಗಿ ಮತ್ತು ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯು 2031ರವರೆಗೆ ರೂಪಿಸಿರುವ ದೀರ್ಘಾವಧಿ ಗುರಿಗಳ ಅಡಿಯಲ್ಲಿ ಈ ಪ್ರಸ್ತಾಪವನ್ನು ಸ್ಪಷ್ಟವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಯಾನ್ ಝೀಯಾಂಗ್ ತಿಳಿಸಿದ್ದಾರೆ. 

ಇತಿಹಾಸದಲ್ಲಿ ಇದಕ್ಕೆ ಸಮಾನಾಂತರವಾದದ್ದು ಯಾವುದೂ ಇಲ್ಲ. ಜಲವಿದ್ಯುತ್ ಕೈಗಾರಿಕೆಯಲ್ಲಿ ಚೀನಾಕ್ಕೆ ಇದು ಐತಿಹಾಸಿಕ ಅವಕಾಶವಾಗಿದೆ ಎಂದು ಹೇಳಿದ್ದಾರೆಂದು ವರದಿಗಳು ತಿಳಿಸಿವೆ. 

ಚೀನಾದ ಈ ನಿರ್ಧಾರ ಇದೀಗ ಭಾರತ ಮತ್ತು ಬಾಂಗ್ಲಾದೇಶಕ್ಕೆ ಕಳವಳ ಉಂಟಾಗುವಂತೆ ಮಾಡಿದೆ. ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಟಿಬೆಟ್'ನಲ್ಲಿ ಚೀನಾ ಬೃಹತ್ ಅಣೆಕಟ್ಟು ನಿರ್ಮಿಸಿದ್ದೇ ಆದರೆ, ಬಾಂಗ್ಲಾದೇಶದ ಅನೇಕ ನದಿ ತೀರದ ರಾಜ್ಯಗಳಿಗೆ ಇದು ಅಪಾಯವುಂಟು ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com