ಮಗುವನ್ನು ಹತ್ಯೆ ಮಾಡುತ್ತಿರುವ ಆಸ್ಟ್ರೇಲಿಯಾ ಸೈನಿಕನ ನಕಲಿ ಚಿತ್ರ ಹಂಚಿಕೊಂಡ ಚೀನಾ: ಕ್ಷಮೆಗೆ ಆಗ್ರಹಿಸಿದ ಆಸಿಸ್ ಪ್ರಧಾನಿ
ಮಗುವನ್ನು ಹತ್ಯೆ ಮಾಡುತ್ತಿರುವ ಆಸ್ಟ್ರೇಲಿಯಾ ಸೈನಿಕನ ನಕಲಿ ಚಿತ್ರ ಹಂಚಿಕೊಂಡ ಚೀನಾ ಸರ್ಕಾರವನ್ನು ಕಟುವಾದ ಶಬ್ದಗಳಿಂದ ಆಸಿಸ್ ಸರ್ಕಾರ ಖಂಡಿಸಿದ್ದು, ಕೂಡಲೇ ಚೀನಾ ಸರ್ಕಾರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.
Published: 30th November 2020 03:01 PM | Last Updated: 30th November 2020 03:05 PM | A+A A-

ಆಸಿಸ್ ಪ್ರಧಾನಿ ಸ್ಕಾಟ್ ಮಾರಿಸನ್
ನವದೆಹಲಿ: ಮಗುವನ್ನು ಹತ್ಯೆ ಮಾಡುತ್ತಿರುವ ಆಸ್ಟ್ರೇಲಿಯಾ ಸೈನಿಕನ ನಕಲಿ ಚಿತ್ರ ಹಂಚಿಕೊಂಡ ಚೀನಾ ಸರ್ಕಾರವನ್ನು ಕಟುವಾದ ಶಬ್ದಗಳಿಂದ ಆಸಿಸ್ ಸರ್ಕಾರ ಖಂಡಿಸಿದ್ದು, ಕೂಡಲೇ ಚೀನಾ ಸರ್ಕಾರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.
ಹೌದು.. ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಲಿಜಿಯಾನ್ ಜಾವೋ ತಮ್ಮ ಟ್ವಿಟರ್ ಖಾತೆಯಲ್ಲಿ, ಅಫ್ಗಾನಿಸ್ತಾನದ ಮಗುವಿನ ಕುತ್ತಿಗೆಗೆ ಆಸ್ಟ್ರೇಲಿಯಾದ ಸೈನಿಕರೊಬ್ಬರು ಚಾಕು ಹಿಡಿದಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಆಸ್ಟ್ರೇಲಿಯಾದ ಸೈನಿಕರು ನಡೆಸಿರುವ ಅಫ್ಗಾನ್ ನಾಗರಿಕರು ಮತ್ತು ಕೈದಿಗಳ ಹತ್ಯೆಯಿಂದ ಆಘಾತವಾಗಿದೆ. ಅಂತಹ ಕೃತ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಕೃತ್ಯಗಳಿಗೆ ಆಸ್ಟ್ರೇಲಿಯಾವನ್ನು ಹೊಣೆಗಾರರನ್ನಾಗಿ ಮಾಡಲು ನಾವು ಕರೆ ನೀಡುತ್ತೇವೆ ಎಂದು ಹೇಳಿದ್ದರು.
ಲಿಜಿಯಾನ್ ಜಾವೋ ಟ್ವೀಟ್ ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾ ಕೂಡಲೇ ಚೀನಾ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ. ಅಂತೆಯೇ ಆಸ್ಟ್ರೇಲಿಯಾ ಸೈನಿಕನ ಚಿತ್ರವು ನಕಲಿ ಎಂದು ಹೇಳಿರುವ ಆಸ್ಟ್ರೇಲಿಯಾ, 'ಇದು ಅಸಹ್ಯಕರ' ಎಂದಿದೆ. ಅಲ್ಲದೆ, ಚಿತ್ರವನ್ನು ಟ್ವಿಟರ್‌ನಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದೆ.
ಈ ಕುರಿತಂತೆ ಮಾಧ್ಯಮಗೋಷ್ಠಿ ನಡೆಸಿದ ಅಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮೋರಿಸ್ಸನ್, ಚೀನಾ ತನ್ನ ಈ ನಡೆಗಾಗಿ ಚೀನಾ ಆಸ್ಟ್ರೇಲಿಯಾದ ಕ್ಷಮೆ ಕೋರಬೇಕು. ಲಿಜಿಯಾನ್ ಅವರು ತಮ್ಮ ಖಾತೆಯಿಂದ ಮಾಡಿರುವ ಪೋಸ್ಟ್ ಅನ್ನು ತೆಗೆದುಹಾಕಬೇಕು ಎಂದು ಹೇಳಿದ್ದಾರೆ.
ಈ ಹಿಂದೆ ಕೊರೊನಾ ವೈರಸ್ ಮೂಲದ ಬಗ್ಗೆ ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ತನಿಖೆಗೆ ಕರೆ ನೀಡಿದಾಗಿನಿಂದ ಚೀನಾದೊಂದಿಗಿನ ಆಸ್ಟ್ರೇಲಿಯಾದ ಸಂಬಂಧ ಹದಗೆಟ್ಟಿದೆ. ಇದೇ ಸನ್ನಿವೇಶದಲ್ಲಿ ನಡೆದಿರುವ ಈ ಘಟನೆ ಇಬ್ಬರ ನಡುವಿನ ಸಂಬಂಧಕ್ಕೆ ಮತ್ತಷ್ಟು ಪೆಟ್ಟು ನೀಡಿದೆ.
Shocked by murder of Afghan civilians & prisoners by Australian soldiers. We strongly condemn such acts, &call for holding them accountable. pic.twitter.com/GYOaucoL5D
— Lijian Zhao 赵立坚 (@zlj517) November 30, 2020