ಇಂಡೋ-ಚೀನಾ ರಕ್ಷಣಾ ಸಚಿವರ ಸಭೆ: ಗಡಿಯಲ್ಲಿ ಶಾಂತಿಗೆ ಭಾರತ ಆಗ್ರಹ, ಸಂಪೂರ್ಣವಾಗಿ ಸೇನೆ ಹಿಂಪಡೆಯುವಂತೆ ಚೀನಾಗೆ ಒತ್ತಾಯ

ಪೂರ್ವ ಲಡಾಕ್ ನ ಭಾರತ-ಚೀನಾ ಗಡಿಭಾಗದಲ್ಲಿ ಸೇನೆ ನಿಯೋಜನೆ, ಸಂಘರ್ಷ ಮುಂದುವರಿಯುತ್ತಿರುವುದರ ಮಧ್ಯೆ ರಷ್ಯಾದ ಮಾಸ್ಕೊದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾ ರಕ್ಷಣಾ ಸಚಿವ ಜನರಲ್ ವೈ ಫೆಂಗೆ ಮಧ್ಯೆ ಮಾತುಕತೆ ನಡೆದಿದ್ದು ಭಾರತೀಯ ಕಾಲಮಾನ ಪ್ರಕಾರ ಕಳೆದ ರಾತ್ರಿ ಮುಕ್ತಾಯವಾಗಿದೆ.
ಮಾಸ್ಕೊದಲ್ಲಿ ಕಳೆದ ರಾತ್ರಿ ನಡೆದ ಸಭೆ
ಮಾಸ್ಕೊದಲ್ಲಿ ಕಳೆದ ರಾತ್ರಿ ನಡೆದ ಸಭೆ

ಮಾಸ್ಕೊ: ಪೂರ್ವ ಲಡಾಕ್ ನ ಭಾರತ-ಚೀನಾ ಗಡಿಭಾಗದಲ್ಲಿ ಸೇನೆ ನಿಯೋಜನೆ, ಸಂಘರ್ಷ ಮುಂದುವರಿಯುತ್ತಿರುವುದರ ಮಧ್ಯೆ ರಷ್ಯಾದ ಮಾಸ್ಕೊದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾ ರಕ್ಷಣಾ ಸಚಿವ ಜನರಲ್ ವೈ ಫೆಂಗೆ ಮಧ್ಯೆ ಮಾತುಕತೆ ನಡೆದಿದ್ದು ಭಾರತೀಯ ಕಾಲಮಾನ ಪ್ರಕಾರ ಕಳೆದ ರಾತ್ರಿ ಮುಕ್ತಾಯವಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ರಕ್ಷಣಾ ಸಚಿವಾಲಯ, ಉಭಯ ನಾಯಕರ ನಡುವಿನ ಸಭೆ ಮುಕ್ತಾಯವಾಗಿದೆ. ಒಟ್ಟಾರೆ 2 ಗಂಟೆ 20 ನಿಮಿಷ ಮಾತುಕತೆ ನಡೆಯಿತು ಎಂದು ಹೇಳಿದೆ.

 ನಿನ್ನೆ ರಾಜನಾಥ್ ಸಿಂಗ್ ಮತ್ತು ಚೀನಾ ರಕ್ಷಣಾ ಸಚಿವರ ಮಧ್ಯೆ ಏನೇನು ಮಾತುಕತೆಗಳು ನಡೆಯಿತು ಎಂದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ದ್ವಿಪಕ್ಷೀಯ ಮಾತುಕತೆ ವೇಳೆ, ಗಡಿಯಲ್ಲಿ ಶಾಂತಿ, ದೇಶಗಳ ಮಧ್ಯೆ ಪರಸ್ಪರ ನಂಬಿಕೆ, ಸಹಕಾರ, ಸಂಘರ್ಷದ ಮನೋಭಾವನೆಯಿಂದ ಹೊರಬರಲು ರಾಜನಾಥ್ ಸಿಂಗ್ ಚೀನಾ ರಕ್ಷಣಾ ಸಚಿವರಲ್ಲಿ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ ಎಂದು ಗೊತ್ತಾಗಿದೆ. ನಿನ್ನೆ ಶಾಂಘೈ ಸಭೆಯಲ್ಲಿ ರಾಜನಾಥ್ ಸಿಂಗ್, ವಿಶ್ವದ ಶೇಕಡಾ 40ರಷ್ಟು ಜನಸಂಖ್ಯೆ ಶಾಂಘೈ ದೇಶಗಳಲ್ಲಿದ್ದು ಅಂತಾರಾಷ್ಟ್ರೀಯ ನೀತಿ, ನಿಯಮಗಳನ್ನು ನಂಬಿಕೊಂಡು, ಗೌರವ ಕೊಟ್ಟುಕೊಂಡು, ಪರಸ್ಪರ ಹಿತಾಸಕ್ತಿ ಕಾಪಾಡಿಕೊಂಡು ಶಾಂತಿ ಸ್ಥಾಪನೆಗೆ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಈ ವೇಳೆ ಚೀನಾ ರಕ್ಷಣಾ ಸಚಿವರು ಕೂಡ ಹಾಜರಿದ್ದರು.

ಭಾರತ ಮತ್ತು ಚೀನಾ ಮಧ್ಯೆ ಈ ಹಿಂದೆ ಆಗಿದ್ದ ಒಪ್ಪಂದದಂತೆ ಗಡಿಯಿಂದ ತನ್ನ ಸೇನೆಯನ್ನು ಚೀನಾ ಸಂಪೂರ್ಣವಾಗಿ ಹಿಂತೆಗೆದುಕೊಂಡು ಶಾಂತಿ ಮತ್ತು ಭಾತೃತ್ವಕ್ಕೆ ಬದ್ಧವಾಗಬೇಕೆಂದು ಭಾರತ ಕಳೆದ ನಾಲ್ಕು ತಿಂಗಳಿನಿಂದ ಹೇಳುತ್ತಲೇ ಬಂದಿದೆ. ರಾಜತಾಂತ್ರಿಕ ಮತ್ತು ಮಿಲಿಟರಿ ಸಂಧಾನ ಮಾತುಕತೆಯೇ ಗಡಿ ಸಂಘರ್ಷದ ಸಮಸ್ಯೆಗಿರುವ ಪರಿಹಾರ, ಅದಿಲ್ಲದೆ ಭಾರತ ಬೇರೆ ರೀತಿಯ ಸಂಧಾನಕ್ಕೆ ಒಪ್ಪುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ್ ನಿನ್ನೆ ಮತ್ತೆ ಹೇಳಿದ್ದಾರೆ.

ಈ ಮಧ್ಯೆ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ವಿಚಾರದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಭಾರತ ಪುನರುಚ್ಛರಿಸಿದೆ. ಗಡಿ ವಿಚಾರದಲ್ಲಿ ದೇಶಗಳ ಮಧ್ಯೆ ಶಾಂತಿ, ಭಾತೃತ್ವ ಇರದಿದ್ದರೆ ದ್ವಿಪಕ್ಷೀಯ ಸಂಬಂಧಕ್ಕೆ ಅರ್ಥವೇ ಇಲ್ಲ ಎಂದು ಹೇಳಿದೆ.

ಪೂರ್ವ ಲಡಾಕ್ ನಲ್ಲಿ ಚೀನಾ ತನ್ನ ಸೇನೆಯನ್ನು ನಿಯೋಜಿಸಿದ್ದರೂ ಕೂಡ ಈ ಕಷ್ಟದ ಪರಿಸ್ಥಿತಿಯಲ್ಲಿ ಭಾರತ ನಿರಂತರವಾಗಿ ಚೀನಾ ಜೊತೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಯಲ್ಲಿ ನಿರತವಾಗಿದೆ.ಸೇನಾ ಮುಖ್ಯಸ್ಥರು ಲೇಹ್ ಗೆ ಹೋಗಿ ಪರಿಸ್ಥಿತಿ ಪರಾಮರ್ಶಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ನಮ್ಮನ್ನು ಮಾತುಕತೆಯಿಂದ ಹಿಂದೆ ಸರಿಯುವಂತೆ ಮಾಡಿಲ್ಲ. ಡಿಜಿಟಲ್ ವೇದಿಕೆ ಬಳಸಿಕೊಂಡು, ಫೋನ್ ಮೂಲಕ ಚೀನಾ ನಾಯಕರೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ ಎಂದು ನಿನ್ನೆ ವಿಶ್ವ ವ್ಯವಹಾರಗಳ ಭಾರತೀಯ ಮಂಡಳಿ ವೆಬಿನಾರ್ ಕಾರ್ಯಕ್ರಮದಲ್ಲಿ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶೃಂಗ್ಲಾ ತಿಳಿಸಿದ್ದಾರೆ.

ಕಳೆದ ಮೇ 5ರಂದು ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ತನ್ನ ಸೇನೆಯನ್ನು ನಿಯೋಜಿಸಿದ ನಂತರ ಎರಡೂ ದೇಶಗಳ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು, ನಂತರ ಜೂನ್ 15ರಂದು ಯೋಧರ ಮಧ್ಯೆ ನಡೆದಿದ್ದ ಸಂಘರ್ಷದಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾದ ಬಳಿಕ ಪರಿಸ್ಥಿತಿ ಬಿಗಡಾಯಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com