ಭಾರತದಲ್ಲಿನ ಪರಿಸ್ಥಿತಿ ನೋಡಿ ಹೃದಯ ಛಿದ್ರವಾಗಿದೆ: ಗೂಗಲ್ ಸಿಇಒ ಸುಂದರ್ ಪಿಚೈ 135 ಕೋಟಿ ರೂ. ನೆರವು ಘೋಷಣೆ

ಕೋವಿಡ್-19 2ನೇ ಅಲೆಯಿಂದಾಗಿ ತತ್ತರಿಸಿ ಹೋಗಿರುವ ಭಾರತದಲ್ಲಿನ ಪರಿಸ್ಥಿತಿ ಕುರಿತು ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲ ಟ್ವೀಟ್ ಮಾಡಿದ ಬೆನ್ನಲ್ಲೇ ಗೂಗಲ್ ಸಿಇಒ ಭಾರತ ಮೂಲದ ಸುಂದರ್ ಪಿಚೈ ಅವರೂ ಕೂಡ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ಗೂಗಲ್ ಸಿಇಒ ಸುಂದರ್ ಪಿಚೈ
ಗೂಗಲ್ ಸಿಇಒ ಸುಂದರ್ ಪಿಚೈ

ವಾಷಿಂಗ್ಟನ್: ಕೋವಿಡ್-19 2ನೇ ಅಲೆಯಿಂದಾಗಿ ತತ್ತರಿಸಿ ಹೋಗಿರುವ ಭಾರತದಲ್ಲಿನ ಪರಿಸ್ಥಿತಿ ಕುರಿತು ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲ ಟ್ವೀಟ್ ಮಾಡಿದ ಬೆನ್ನಲ್ಲೇ ಗೂಗಲ್ ಸಿಇಒ ಭಾರತ ಮೂಲದ ಸುಂದರ್ ಪಿಚೈ ಅವರೂ ಕೂಡ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುಂದರ್ ಪಿಚೈ ಅವರು, ಭಾರತದಲ್ಲಿನ ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿ ನೋಡಿ ಮನಸ್ಸು ಛಿದ್ರವಾಗಿದೆ. ಗೂಗಲ್ ಈ ಕೂಡಲೇ ಭಾರತಕ್ಕೆ ವೈದ್ಯಕೀಯ ಸರಬರಾಜು, ಹೆಚ್ಚಿನ ಅಪಾಯದಲ್ಲಿರುವ ಸಮುದಾಯಗಳನ್ನು ಬೆಂಬಲಿಸುವ ಉದ್ದೇಶದಿಂದ ಮತ್ತು ನಿರ್ಣಾಯಕ  ಮಾಹಿತಿಯನ್ನು ಹರಡಲು ಸಹಾಯ ಮಾಡುವ ಉದ್ದೇಶದಿಂದ 135 ಕೋಟಿ ರೂ ಅನುದಾನ ನೀಡಲಿದೆ ಎಂದು ಟ್ವೀಟ್ ಮಾಡಿದ್ದಾರೆ. 

ಇದಕ್ಕೂ ಮೊದಲು ಇದೇ ವಿಚಾರವಾಗಿ ಟ್ವೀಟ್ ಮಾಡಿದ್ದ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲ, 'ಭಾರತದ ಪ್ರಸ್ತುತ ಪರಿಸ್ಥಿತಿ ಹೃದಯ ವಿದ್ರಾವಕವಾಗಿದೆ. ಈ ಸಂಕಷ್ಟದ ಪರಿಸ್ಥಿಯಿಲ್ಲಿ ಅಮೆರಿಕ ಸರ್ಕಾರವು ಭಾರತಕ್ಕೆ ನೆರವು ನೀಡಲು ಮುಂದಾಗಿದೆ. ಇದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಅಂತೆಯೇ  ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಧ್ವನಿ, ಸಂಪನ್ಮೂಲ, ಮತ್ತು ತಂತ್ರಜ್ಞಾನವನ್ನು ಭಾರತದಲ್ಲಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಪರಿಹಾರ ಕಾರ್ಯಗಳಿಗೆ ಸಹಾಯ ಮಾಡಲು ಮತ್ತು ನಿರ್ಣಾಯಕ ಆಮ್ಲಜನಕ ಸಾಂದ್ರತೆಯ ಸಾಧನಗಳ ಖರೀದಿಯನ್ನು ಬೆಂಬಲಿಸಲು ಬಳಸುವುದನ್ನು ಮುಂದುವರಿಸುತ್ತದೆ ಎಂದು ಭರವಸೆ  ನೀಡಿದ್ದರು.

ಇನ್ನು ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಪ್ರತಿನಿತ್ಯ 3.50ಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ದೇಶಾದ್ಯಂತ ಚಿಕಿತ್ಸೆಗಾಗಿ ಸೋಂಕಿತರು ಪರದಾಡುತ್ತಿದ್ದು, ಆಸ್ಪತ್ರೆಗಳ ಬೆಡ್ ಗಳು ಸಂಪೂರ್ಣ ಭರ್ತಿಯಾಗಿದ್ದು, ಬೆಡ್ ಗಳಿಲ್ಲದೆ ರೋಗಿಗಳು  ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡುತ್ತಿದ್ದಾರೆ. ಅಂತೆಯೇ ಇತ್ತ ಅಸ್ಪತ್ರೆಗೆ ದಾಖಲಾದ ಸೋಂಕಿತರೂ ಕೂಡ ಆಕ್ಸಿಜನ್ ಕೊರತೆಯಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದು, ಸಾಕಷ್ಟು ರೋಗಿಗಳು ಆಕ್ಸಿಜನ್ ಇಲ್ಲದೇ ಸಾವನ್ನಪ್ಪುತ್ತಿದ್ದಾರೆ. ಅಂತೆಯೇ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಕೂಡ ದೇಶದಲ್ಲಿ ಗಣನೀಯವಾಗಿ  ಏರಿಕೆಯಾಗುತ್ತಿದ್ದು, ಶವಸಂಸ್ಕಾರಕ್ಕಾಗಿ ಶವಾಗಾರಗಳ ಮುಂದೆ ಮೃತರ ಸಂಬಂಧಿಕರು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com